ದೇಶ

ಭಾರತದ ಯಾವುದೇ ಮನವಿಯನ್ನು ಗೌರವಿಸುತ್ತೇವೆ: ಮೆಹುಲ್ ಚೋಕ್ಸಿಗೆ ಆ್ಯಂಟಿಗುವಾ ಸರ್ಕಾರದ 'ಬಿಗ್ ಶಾಕ್'!

Srinivasamurthy VN
ನವದೆಹಲಿ: ವ್ಯಾಪಾರಕ್ಕಾಗಿ ಆ್ಯಂಟಿಗುವಾ ನಾಗರೀಕತ್ವ ಪಡೆದಿರುವೆ ಎಂದಿದ್ದ ಆಭರಣ ಉದ್ಯಮಿ, ಗೀತಾಂಜಲಿ ಜೆಮ್ಸ್ ನ ಮಾಲೀಕ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿಗೆ ಭಾರಿ ಹಿನ್ನಡೆಯಾಗಿದೆ.
ನಿನ್ನೆಯಷ್ಟೇ ಕೆರಿಬಿಯನ್ ನಾಡಿನ ಆ್ಯಂಟಿಗುವಾ ಮತ್ತುಬಾರ್ಬುಡಾ ನಾಗರೀಕತ್ವ ಪಡೆದಿರುವು ಕುರಿತು ಸಮಜಾಯಿಷಿ ನೀಡಿದ್ದ ಮೆಹುಲ್ ಚೋಕ್ಸಿಗೆ ಆ್ಯಂಟಿಗುವಾ ಸರ್ಕಾರ ಬಿಗ್ ಶಾಕ್ ನೀಡಿದ್ದು, ಭಾರತ ಸರ್ಕಾರದ ಯಾವುದೇ ಮನವಿಯನ್ನು ಗೌರವಿಸುತ್ತೇವೆ ಎಂದು ಹೇಳಿದೆ. 
ನಿನ್ನೆ ಮೆಹುಲ್ ಚೋಕ್ಸಿ ಹೇಳಿಕೆ ಬಿಡುಗಡೆಯಾದ ಬೆನ್ನಲ್ಲೇ, ಆ್ಯಂಗುವಾ ಸರ್ಕಾರದ ಸಂಪುಟಸಭೆ ನಡೆದಿದ್ದು, ಈ ಬಗ್ಗೆ ಚರ್ಚಿಸಲಾಗಿದೆ. ಅಲ್ಲದೆ ಭಾರತ ಸರ್ಕಾರದ ಮನವಿಗೆ ಸ್ಪಂದಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಆ್ಯಂಟಿಗುವಾದ ಸಚಿವ ಮಿ.ಗ್ರೀನೆ ಅವರು, ಈ ವರೆಗೂ ಭಾರತ ಸರ್ಕಾರದಿಂದ ಯಾವುದೇ ಮನವಿ ಬಂದಿಲ್ಲ. ಆದರೆ ಭಾರತ ಸರ್ಕಾರದ ಯಾವುದೇ ಮನವಿಯನ್ನು ನಾವು ಗೌರವಿಸುತ್ತೇವೆ ಎಂದು ಹೇಳಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಪತ್ರಿಕಾ ಪ್ರಕಟಣೆ ನೀಡಿದ್ದ ಆರೋಪಿ ಮತ್ತು ಗೀತಾಂಜಲಿ ಜೆಮ್ಸ್ ನ ಮಾಲೀಕ ಮೆಹುಲ್ ಚೋಕ್ಸಿ ತಾನು ತಲೆಮರೆಸಿಕೊಳ್ಳಲು ಕೆರಿಬಿಯನ್ ದೇಶಗಳ ನಾಗರಿಕತ್ವ ಪಡೆದಿಲ್ಲ, ವ್ಯಾಪಾರ ವಿಸ್ತರಣೆಗಾಗಿ ಪಡೆದಿದ್ದೇನೆ ಎಂದು ಹೇಳಿದ್ದರು. ಕೆಲ ಮಾಧ್ಯಮಗಳು ಚೋಕ್ಸಿ ಭಾರತದಲ್ಲಿ ಕಾನೂನು ವಿಚಾರಣೆ ಎದುರಿಸುತ್ತಿರುವುದರಿಂದ ಆತ ವಿದೇಶಗಳಲ್ಲಿ ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದವು.
ಆದರೆ ಪ್ರಸ್ತುತ ಆ್ಯಂಟಿಗುವಾ ಸರ್ಕಾರದ ಹೇಳಿಕೆ ಮೂಲಕ ಕೆರಿಬಿಯನ್ ರಾಷ್ಟಗಳೂ ಕೂಡ ಆರೋಪಿ ಉದ್ಯಮಿಗೆ ಸುರಕ್ಷಿತವಲ್ಲ ಎಂಬುದು ಸಾಬೀತಾಗಿದೆ. ಹೀಗಾಗಿ ಮೆಹುಲ್ ಚೋಕ್ಸಿ ಮತ್ತೊಂದು ರಾಷ್ಟ್ರದತ್ತ ಮುಖಮಾಡುವ ಅನಿವಾರ್ಯತೆ ಎದುರಾಗಿದೆ.
SCROLL FOR NEXT