ಕೋಲ್ಕತ್ತಾ: ಎನ್ಆರ್ಸಿ (ನಾಗರಿಕರ ರಾಷ್ಟ್ರೀಯ ನೋಂದಣಿ) ಕರಡು ಬಂಗಾಳ, ಬಿಹಾರಿ ಹಾಗೂ ಹಿಂದೂಗಳನ್ನು ಟಾರ್ಗೆಟ್ ಮಾಡುವ ಉದ್ದೇಶಪೂರ್ವಕ ಪ್ರಯತ್ನ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ನಾಗರಿಕ ರಾಷ್ಟ್ರೀಯ ನೋಂದಣಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿ, ಈ ಯೋಜನೆಯಿಂದ ಪಶ್ಚಿಮ ಬಂಗಾಳ ಹೆಚ್ಚು ಸಮಸ್ಯೆ ಎದುರಿಸಲಿದೆ. ಅಸ್ಸಾಂ ನ ನಾಗರಿಕರಲ್ಲದ 40 ಲಕ್ಷ ಜನರು ಈಗ ಎಲ್ಲಿ ವಾಸಿಸುತ್ತಾರೆ? ಬಾಂಗ್ಲಾದೇಶ ಅವರನ್ನು ವಾಪಸ್ ತೆಗೆದುಕೊಳ್ಳುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಬಿಜೆಪಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿರುವ ಮಮತಾ ಬ್ಯಾನರ್ಜಿ, ಇನ್ನೂ ಎಷ್ಟು ಸಮಯ ಈ ರೀತಿ ಹೊಡೆದು, ಒಡೆದು ಆಳುವ ನೀತಿಯನ್ನು ಅನುಸರಿಸುತ್ತೀರಿ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಕರಡು ಪ್ರತಿಯಿಂದ ಡಿಲೀಟ್ ಮಾಡಲಾಗಿರುವ 40 ಲಕ್ಷ ಜನರು ಈಗ ಎಲ್ಲಿಗೆ ಹೋಗುತ್ತಾರೆ? ಅವರಿಗಾಗಿ ಕೇಂದ್ರ ಸರ್ಕಾರ ಯಾವುದಾದರೂ ಪ್ರತ್ಯೇಕ ಪುನರ್ವಸತಿ ಯೋಜನೆಯನ್ನು ಪ್ರಾರಂಭಿಸಲಿದೆಯೇ ಇದರಿಂದ ಅಂತಿಮವಾಗಿ ತೊಂದರೆ ಎದುರಿಸುವುದು ಪಶ್ಚಿಮ ಬಂಗಾಳ. ಇದು ಬಿಜೆಪಿ ಮಾಡುತ್ತಿರುವ ಮತ ರಾಜಕಾರಣ ಎಂದು ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಧಾರ್, ಪಾಸ್ಪೋರ್ಟ್ ಹೊಂದಿರುವವರ ಹೆಸರುಗಳನ್ನೂ ಸಹ ಕರಡು ಪ್ರತಿಯಿಂದ ತೆಗೆದುಹಾಕಲಾಗಿದ್ದು ಸರ್ಕಾರ ಒತ್ತಾಯಪೂರ್ವಕವಾಗಿ 40 ಲಕ್ಷ ಜನರನ್ನು ಹೊರಹಾಕುತ್ತಿದೆಯೇ ಎಂದು ಪ್ರಶ್ನಿಸಿದ್ದು, ಎನ್ ಆರ್ ಸಿ ಕುರಿತು ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ಸರ್ಕಾರವನ್ನು ಸಂಪರ್ಕಿಸಿಲ್ಲ ಎಂದೂ ಅಸಮಾಧಾನಗೊಂಡಿದ್ದಾರೆ.