ದೇಶ

ಅಸ್ಸಾಂ ಹೊಸ ಕಾನೂನು: ವಯಸ್ಸಾದ ಪೋಷಕರ ನಿರ್ಲಕ್ಷ್ಯ ಮಾಡಿದರೆ ಸರ್ಕಾರಿ ನೌಕರರ ವೇತನ ಕಟ್!

Srinivasamurthy VN
ಗುವಾಹತಿ: ವಯಸ್ಸಾದ ಪೋಷಕರನ್ನು ನಿರ್ಲಕ್ಷಿಸಿ ಅವರನ್ನು ಬೀದಿ ತಳ್ಳುವ ದುಷ್ಟ ಮಕ್ಕಳಿಗೆ ಪಾಠ ಕಲಿಸಲು ಅಸ್ಸಾಂ ಸರ್ಕಾರ ಮಹತ್ವದ ಕಾನೂನನ್ನು ಜಾರಿಗೆ ತರಲು ಮುಂದಾಗಿದೆ.
ಅಸ್ಸಾಂ ಸರ್ಕಾರ ನೂತನ ಕಾನೂನಿನ ಅನ್ವಯ ವಯಸ್ಸಾದ ಪೋಷಕರನ್ನು ನಿರ್ಲಕ್ಷಿಸಿದರೆ ಅಥವಾ ಅವರನ್ನು ಬೀದಿಗೆ ತಳ್ಳಿದರೆ ಅಂತಹ ವ್ಯಕ್ತಿಯ ವೇತನದಲ್ಲಿ ಕಡಿತ ಮಾಡುವ ಹೊಸ ಕಾನೂನು ಜಾರಿ ಮಾಡಲು ಮುಂದಾಗಿದೆ. ಮೂಲಗಳ ಪ್ರಕಾರ ಇದೇ ಅಕ್ಚೋಬರ್ 2ರಿಂದ ನೂತನ ಕಾನೂನು ಜಾರಿಯಾಗುವ ಸಾಧ್ಯತೆ ಇದೆ. ಆ ಮೂಲಕ ಇಂತಹುದೊಂದು ಕಾನೂನು ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಅಸ್ಸಾಂ ಪಾತ್ರವಾಗಲಿದೆ.
ಆರಂಭದಲ್ಲಿ ಈ ಕಾನೂನನ್ನು ಸರ್ಕಾರಿ ಅಧಿಕಾರಿಗಳ ಮೇಲೆ ಜಾರಿ ಮಾಡಲಾಗುತ್ತಿದ್ದು, ಮುಂದಿನ ಬೆಳವಣಿಗೆಗಳನ್ನು ನೋಡಿಕೊಂಡು ಎಲ್ಲ ವಿಭಾಗದ ಉದ್ಯೋಗಸ್ಥರ ಮೇಲೂ ಹೇರಲೂ ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಪ್ರಮುಖವಾಗಿ ಈ ಹೊಸ ಕಾನೂನಿನ ಅನ್ವಯ ಯಾವುದೇ ಆದಾಯದ ಮೂಲ ಇಲ್ಲದ ವಯಸ್ಸಾದ ಹಿರಿಯರು ಮತ್ತು ಅಂಗವೈಕಲ್ಯ ಸಂಬಂಧಿಕರನ್ನು ನಿರ್ಲಕ್ಷ ಮಾಡುವವರ ವೇತನದಲ್ಲಿ ಕಡಿತ ಮಾಡಲಾಗುತ್ತದೆ.
ಕಳೆದ ವರ್ಷವಷ್ಟೇ ಅಸ್ಸಾಂ ಸರ್ಕಾರ ವಿಧಾನಸಭೆಯಲ್ಲಿ ಅಸ್ಸಾಂ ಎಂಪ್ಲಾಯೀಸ್ ರೆಸ್ಪಾನ್ಸಿಬಿಲಿಟಿ ಅಂಡ್ ನಾರ್ಮ್ಸ್ ಫಾರ್ ಅಕೌಂಟೆಬಿಲಿಟಿ ಅಂಡ್ ಮಾನಿಟರಿಂಗ್ (ಪ್ರಣಾಮ್) ಬಿಲ್ 2017ನ್ನು ಮಂಡಿಸಿ ಅನುಮೋದನೆ ಪಡೆದಿತ್ತು. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅಸ್ಸಾಂ ಸಚಿವ ಹಿಮಂತ ಬಿಸ್ವಾ ಶರ್ಮಾ ಅವರು, ಪೋಷಕರ ತೊರೆಯುವ, ಕಿರುಕುಳ ನೀಡುವ, ಪಾಲನೆ ಮಾಡದ ಸರ್ಕಾರಿ ಅಧಿಕಾರಿಗಳ ವೇತನದಲ್ಲಿ ಶೇ.10ರಷ್ಟು ಕಡಿತ ಮಾಡಲಾಗುತ್ತದೆ. ಒಂದು ವೇಳೆ ಪ್ರಕರಣ ಗಂಭೀರವಾಗಿದ್ದರೆ ಆಗ ಶೇ.15ರವರೆಗೂ ವೇತನ ಕಡಿತ ಮತ್ತು ಇತರೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.
SCROLL FOR NEXT