ದೇಶ

ಎನ್ಆರ್‏ಸಿಯಿಂದ ನಾಗರಿಕ ಯುದ್ಧ, ರಕ್ತಪಾತವಾಗುತ್ತೆ: ಮಮತಾ ಬ್ಯಾನರ್ಜಿ ಎಚ್ಚರಿಕೆ

Lingaraj Badiger
ನವದೆಹಲಿ: ಅಸ್ಸಾಂನಲ್ಲಿ ನಡೆದ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ) ಪ್ರಕ್ರಿಯೆ ರಾಜಕೀಯ ಪ್ರೇರಿತ ಮತ್ತು ಜನರನ್ನು ಒಡೆಯುವ ತಂತ್ರ ಎಂದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಹೀಗೆ ಮುಂದುವರೆದರೆ ನಾಗರಿಕ ಯುದ್ಧ, ರಕ್ತಪಾತವಾಗುತ್ತೆ ಎಂದು ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.
ಇಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಟಿಎಂಸಿ ಮುಖ್ಯಸ್ಥೆ, ಕೇಸರಿ ಪಕ್ಷ ದೇಶ ಒಡೆಯಲು ಯತ್ನಿಸುತ್ತಿದೆ. ಆದರೆ ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಎನ್ ಆರ್ ಸಿ ಪ್ರಕ್ರಿಯೆ ರಾಜಕೀಯ ಪ್ರೇರಿತವಾಗಿದ್ದು, ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ಹಿಂದೆ, ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಒಂದೇಯಾಗಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. 1971ರ ಮಾರ್ಚ್ ವರೆಗೆ ಭಾರತಕ್ಕೆ ಬಂದವರೆಲ್ಲ ಭಾರತೀಯರು ಎಂದು ದೀದಿ ಹೇಳಿದ್ದಾರೆ.
ಬಿಜೆಪಿ ಎನ್ ಆರ್ ಸಿ ಮೂಲಕ ಅಲ್ಪಸಂಖ್ಯಾತರ ವಿರುದ್ಧ ಪಿತೂರಿ ನಡೆಸಿದ ಎಂದು ಆರೋಪಿಸಿದ ಪಶ್ಚಿಮ ಬಂಗಾಳ ಸಿಎಂ, ಅಸ್ಸಾಂ ನಲ್ಲಿ ಏನು ನಡೆಯುತ್ತಿದೆ? ಎನ್ ಆರ್ ಸಿ ಸಮಸ್ಯೆ ಕೇವಲ ಬಂಗಾಳಿಗಳಿಗೆ ಮಾತ್ರವಲ್ಲ, ಅಲ್ಪಸಂಖ್ಯಾತರು, ಹಿಂದೂಗಳು, ಬಂಗಾಳಿಗಳು, ಬಿಹಾರಿಗಳಿಗೂ ಸಮಸ್ಯೆಯಾಗಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಪಕ್ಷಕ್ಕೆ ಮತ ಚಲಾವಣೆ ಮಾಡಿದ್ದವರನ್ನು ಏಕಾಏಕಿ ಅವರದ್ದೇ ದೇಶದಲ್ಲಿ ನಿರಾಶ್ರಿತರನ್ನಾಗಿ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಎನ್ ಆರ್ ಸಿ ಅಸ್ಸಾಂ ಪಟ್ಟಿಯಲ್ಲಿ ನಮ್ಮ ಮಾಜಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಮನೆತನದವರ ಹೆಸರೇ ಕಣ್ಮರೆಯಾಗಿರುವುದು ಮತ್ತಷ್ಟು ಅಚ್ಚರಿ ಮೂಡಿಸಿದೆ, ಎನ್ ಆರ್ ಸಿ ಬಗ್ಗೆ ಇದಕ್ಕಿಂತ ಬೇರೇನು ಹೇಳುವುದಕ್ಕೆ ಸಾಧ್ಯ? ಈ ರೀತಿ ಇನ್ನೂ ಹಲವು ಜನರ ಹೆಸರು ನಾಪತ್ತೆಯಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. 
SCROLL FOR NEXT