ದೇಶ

ಸತತ ಸೋಲು: ಕಾಂಗ್ರೆಸ್ ಪಕ್ಷದಲ್ಲಿ ಅಧಿಕ ವೆಚ್ಚಗಳಿಗೆ ಕಡಿವಾಣ

Sumana Upadhyaya

ನವದೆಹಲಿ: ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ಈಗ ವೆಚ್ಚಕ್ಕೆ ಕಡಿತ ಹಾಕುವ ಕ್ರಮವನ್ನು ಅನುಸರಿಸಲಾಗುತ್ತಿದೆ. ಸುಮಾರು 60 ವರ್ಷಗಳ ಕಾಲ ದೇಶವನ್ನಾಳಿದ್ದ ಕಾಂಗ್ರೆಸ್ 2014ರ ಲೋಕಸಭೆ ಚುನಾವಣೆ ನಂತರ ವಿಧಾನಸಭೆ ಚುನಾವಣೆಯಲ್ಲಿ ಸಹ ಸಾಲು ಸಾಲಾಗಿ ಸೋಲನ್ನು ಕಂಡಿದೆ. ಇದರಿಂದಾಗಿ ಪಕ್ಷದಲ್ಲಿ ವೆಚ್ಚಕ್ಕೆ ಕಡಿವಾಣ ಹಾಕಲಾಗುತ್ತಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಆದಾಯ ಕೂಡ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದರಿಂದಾಗಿ ಪಕ್ಷದ ಸಭೆಗಳು, ಆಚರಣೆಗಳು, ಕಂಪ್ಯೂಟರ್ ವಿಭಾಗ, ಸುದ್ದಿಗಳ ಪ್ರಸಾರ, ಮಾಧ್ಯಮ ವಿಭಾಗ ಮತ್ತು ಇತರ ಕ್ಷೇತ್ರಗಳಲ್ಲಿ ವೆಚ್ಚಕ್ಕೆ ಭಾರೀ ಕಡಿವಾಣ ಹಾಕಲಾಗುತ್ತಿದೆ. ಒಂದು ಸಮಯದಲ್ಲಿ ದೆಹಲಿಯ ಅಕ್ಬರ್ ರಸ್ತೆಯಲ್ಲಿ ಪ್ರತಿಯೊಂದು ವಿಷಯಕ್ಕೂ ಸಭೆ, ಚಹ ಮೀಟಿಂಗ್, ಕಾರ್ಪೊರೇಟ್ ಸಭೆಗಳಿಂದ ಲಕ್ಷಾಂತರ, ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿತ್ತು.

2016-17ನೇ ಸಾಲಿನಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಅನುದಾನದಲ್ಲಿ ಕೂಡ ಭಾರೀ ಇಳಿಮುಖವಾಗಿದೆ. ಉದಾಹರಣೆಗೆ 2015-16ರಲ್ಲಿ ಪಕ್ಷಕ್ಕೆ ಸಂಬಂಧಪಟ್ಟ ಸಭೆಗಳಿಗೆ 17.45 ಕೋಟಿ ರೂಪಾಯಿಗಳನ್ನು ನೀಡಿದರೆ 2016-17ರಲ್ಲಿ 8.31 ಕೋಟಿ ರೂಪಾಯಿಗೆ ಇಳಿಕೆಯಾಗಿತ್ತು. ಪಕ್ಷದಲ್ಲಿನ ಸಂಭ್ರಮಾಚರಣೆಗಳಿಗೆ 2015-16ರಲ್ಲಿ 4.9 ಕೋಟಿಯಾದರೆ 2016-17ರಲ್ಲಿ 23.75 ಲಕ್ಷಕ್ಕೆ ಇಳಿಕೆಯಾಗಿದೆ.

ಕಾಂಗ್ರೆಸ್ ಪಕ್ಷದ 125ನೇ ವರ್ಷಾಚರಣೆಗೆ ಹೆಚ್ಚು ಹಣ ವೆಚ್ಚ ಮಾಡಿದ್ದ 2016-17ರಲ್ಲಿ ಕಂಪ್ಯೂಟರ್ ವಿಭಾಗದಲ್ಲಿ ವೆಚ್ಚ ಮಾಡಿದ್ದು 26.58 ಲಕ್ಷ ರೂಪಾಯಿ. ಅದರ ಹಿಂದಿನ ವರ್ಷ 39 ಲಕ್ಷ ವೆಚ್ಚವಾಗಿತ್ತು. ಮಾಧ್ಯಮ ವಿಭಾಗದಲ್ಲಿ 28.10 ಲಕ್ಷ ರೂಪಾಯಿಯಿಂದ 14.74 ಲಕ್ಷ ರೂಪಾಯಿಗೆ ವೆಚ್ಚ ಇಳಿದಿದೆ. ಕಚೇರಿ ವೆಚ್ಚ ಕೂಡ 57.8 ಲಕ್ಷ ರೂಪಾಯಿಗಳಿಂದ 50.97 ಲಕ್ಷಕ್ಕೆ ಇಳಿಕೆಯಾಗಿದೆ. ಅನಗತ್ಯ ವೆಚ್ಚಗಳಿಗೆ ಪಕ್ಷ ಕಡಿವಾಣ ಹಾಕಿದೆ.

ಅಗತ್ಯವಿರುವಲ್ಲಿ ಖರ್ಚು ಮಾಡುತ್ತಿದ್ದೇವೆ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವುದು ಉತ್ತಮ ಎಂದು ಪಕ್ಷದ ನಾಯಕರೊಬ್ಬರು ಹೇಳುತ್ತಾರೆ. ದೇಶದಲ್ಲಿನ ರಾಜಕೀಯ ಪಕ್ಷಗಳ ಆದಾಯ ಮತ್ತು ವೆಚ್ಚಗಳ ಕುರಿತು ಲೆಕ್ಕ ಹಾಕುವ ಎಡಿಆರ್, ಕಳೆದ ನಾಲ್ಕೈದು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದ ವೆಚ್ಚ ಗಣನೀಯವಾಗಿ ಇಳಿಕೆಯಾಗಿದೆ ಎಂದು ಹೇಳುತ್ತದೆ.

ಕಾಂಗ್ರೆಸ್ ಪಕ್ಷದ ಆದಾಯ 2014-15ರಲ್ಲಿ 593.31 ಕೋಟಿ ರೂಪಾಯಿಗಳಿದ್ದರೆ, ಮರುವರ್ಷವೇ ಗಣನೀಯವಾಗಿ 261.56 ಕೋಟಿ ರೂಪಾಯಿಗಳಿಗೆ ಇಳಿಕೆಯಾಯಿತು. 2016-17ರಲ್ಲಿ ಮತ್ತಷ್ಟು 225.36 ಕೋಟಿ ರೂಪಾಯಿಗೆ ಇಳಿಕೆಯಾಗಿದೆ. ಒಟ್ಟು ವೆಚ್ಚ ಕೂಡ 765 ಕೋಟಿ ರೂಪಾಯಿಗಳಿಂದ 2015-16ಕ್ಕೆ 193 ಕೋಟಿ ರೂಪಾಯಿಗಳಿಗೆ ಇಳಿಕೆಯಾಗಿದೆ. ಆದರೂ ಒಟ್ಟು ವೆಚ್ಚ 2016-17ರಲ್ಲಿ 321 ಕೋಟಿ ರೂಪಾಯಿ ಆಗಿತ್ತು ಎಂದು ತಿಳಿದುಬರುತ್ತದೆ.

SCROLL FOR NEXT