ದೇಶ

ಪ್ರಧಾನಿ ಮೋದಿ, ಅಮಿತ್ ಶಾ ಗಿಂತ 'ಜ್ಯಾತ್ಯಾತೀತ' ಹೆಚ್ ಡಿ ದೇವೇಗೌಡ ಉತ್ತಮ: 'ಸಾಮ್ನಾ'ದಲ್ಲಿ ಶಿವಸೇನೆ

Srinivasamurthy VN
ಮುಂಬೈ: ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗಿಂತ ಜೆಡಿಎಸ್ ವರಿಷ್ಠ, ಜ್ಯಾತ್ಯಾತೀತ ನಾಯಕ ಎಚ್ ಡಿ ದೇವೇಗೌಡ ಉತ್ತಮ ಎಂದು ಶಿವಸೇನೆ ಹೇಳಿದೆ.
ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಇಂತಹುದೊಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದ್ದು, ಪತ್ರಿಕೆಯ ಸಂಪಾದಕರೂ ಕೂಡ ಆಗಿರುವ ಶಿವಸೇನೆ ಸಂಸದ ಸಂಜಯ್ ರಾವತ್ ತಮ್ಮ ಲೇಖನದಲ್ಲಿ ಶಿವಸೇನೆ ಬಿಜೆಪಿಯ ಅತೀ ದೊಡ್ಡ ಎದುರಾಳಿ ಎಂದು ಹೇಳಿದ್ದಾರೆ. ಅಲ್ಲದೆ ಈ ದೇಶಕ್ಕೆ ಪ್ರಧಾನಿ ಮೋದಿ, ಅಮಿತ್ ಶಾ ಜುಗಲ್ ಬಂದಿ ಬೇಕಿಲ್ಲ. ಕಾಂಗ್ರೆಸ್ ಅಥವಾ ಜೆಡಿಎಸ್ ನ ಜ್ಯಾತ್ಯಾತೀತ ನಾಯಕ ದೇವೇಗೌಡರನ್ನು ಸ್ವೀಕರಿಸಿದೆ. ಪ್ರಧಾನಿ ಮೋದಿ, ಅಮಿತ್ ಶಾ ಗಿಂತ 'ಜ್ಯಾತ್ಯಾತೀತ' ಹೆಚ್ ಡಿ ದೇವೇಗೌಡ ಉತ್ತಮ ಎಂದು ಅವರು ಹೇಳಿದ್ದಾರೆ.
ಸಾಮ್ನಾ ಪತ್ರಿಕೆಯ 'ರೋಕ್-ಠೋಕ್' (ನೇರನುಡಿ) ಅಂಕಣದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಸಂಜಯ್ ರಾವತ್, ಶಿವಸೇನೆಯ ಹಿಂದುತ್ವವಾದ ಬಿಜೆಪಿಗೆ ತಿರುಗುಬಾಣವಾಗಲಿದೆ. ಬಿಜೆಪಿ ಮಾಜಿ ಸಂಸದ ದಿವಂಗತ ಚಿಂತಮಾನ್ ವನಗಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತದೆ. ಆದರೆ ಇದೇ ಬಿಜೆಪಿ ಚುನಾವಣೆಯಲ್ಲಿ ಪಾಲ್ಗಾರ್ ನಲ್ಲಿ ನಮ್ಮ ಪಕ್ಷದ ಪರ ಸ್ಪರ್ಧಿಸಿದ್ದ ಅವರ ಮಗನನ್ನು ಸೋಲಿಸುತ್ತದೆ. ಪಾಲ್ಗಾರ್ ನಲ್ಲಿ ಬಿಜೆಪಿ ಶಿವಸೇನೆ ಎದುರಾಳಿಯಾಗಿತ್ತು. ಆದರೆ ಶಿವಸೇನೆ ಎನ್ ಡಿಎ ಮೈತ್ರಿಕೂಟ ಸೇರಿದ ಬಳಿಕ ಕ್ಷೇತ್ರದಲ್ಲಿ ಪಕ್ಷದ ವರ್ಚಸ್ಸು ಕುಂದಿದೆ. ಶಿವಸೇನೆಯನ್ನು ಮೈತ್ರಿಕೂಟಕ್ಕೆ ಸೇರಿಸಿಕೊಂಡು ಹಣ ಮತ್ತು ಅಧಿಕಾರದ ಮೂಲಕ ಅದನ್ನು ನಿರ್ಬಲಗೊಳಿಸುವುದು ಬಿಜೆಪಿ ಷಡ್ಯಂತ್ರ. ಇವಿಎಂಗಳ ದುರ್ಬಳಕೆ ಮೂಲಕ ಪಾಲ್ಗಾರ್ ನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಎಂದು ರಾವತ್ ಆರೋಪಿಸಿದ್ದಾರೆ.
ಅಂತೆಯೇ ಇವಿಎಂ ದೋಷಗಳನ್ನು ಹಗರಣ ಎಂದು ಬಣ್ಣಿಸಿರುವ ರಾವತ್, ಪಾಲ್ಗಾರ್ ಚುನಾವಣಾ ದಿನದಂದು ಸುಮಾರು 100 ಪ್ರದೇಶಗಳಲ್ಲಿ ಇವಿಎಂ ದೋಷದ ಕುರಿತು ತಮಗೆ ಮಾಹಿತಿ ಬಂದಿತ್ತು. ಅಲ್ಲದೆ ಸಾಕಷ್ಟು ಮತಗಟ್ಟೆಗಳಲ್ಲಿ ಅಧಿಕಾರಿಗಳು ಅನಧಿಕೃತವಾಗಿ ಮತದಾನದ ಅವಧಿಯನ್ನು ವಿಸ್ತರಣೆ ಮಾಡಿದ್ದರು. ಪ್ರತೀ ಮತಗಟ್ಟೆಯಲ್ಲೂ ಸರಾಸರಿ 100 ಮತಗಳು ಹೆಚ್ಚುವರಿಯಾಗಿ ಹಾಕಿಸಲಾಗಿದೆ. ಚುನಾವಣಾ ದಿನ ಜಿಲ್ಲಾಧಿಕಾರಿಗಳು ಶೇ.46ರಷ್ಟು ಮತದಾನವಾಗಿದೆ ಎಂದು ಘೋಷಣೆ ಮಾಡಿದ್ದರು. ಆದರೆ ಮಾರನೆಯ ದಿನವೇ ಶೇ.56ರಷ್ಚು ಮತದಾನವಾದ ಕುರಿತು ವರದಿ ಪ್ರಸಾರವಾಗಿದೆ. ರಾತ್ರೋ ರಾತ್ರಿ ಶೇ.10ರಷ್ಚು ಮತದಾನ ಪ್ರಮಾಣ ಅಂದರೆ ಸರಿಸುಮಾರು 82 ಸಾವಿರ ಮತಗಳು ಹೆಚ್ಚಾಗಲು ಹೇಗೆ ಸಾಧ್ಯ. ಆಯೋಗದಲ್ಲಿರುವ ಆರ್ ಎಸ್ ಎಸ್ ಹಿನ್ನಲೆಯ ಸದಸ್ಯರೇ ಇದರ ಹಿಂದೆ ಇದ್ದಾರೆ. 
ಪಾಲ್ಗಾರ್ ನಲ್ಲಿ ಬಿಜೆಪಿ ಗೆದ್ದಿರಬಹುದು. ಆದರೆ ಉಳಿದ ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಇದು ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಉಪ ಚುನಾವಣಾ ಫಲಿತಾಂಶಗಳು ದೇಶದಲ್ಲಿ ಬಿಜೆಪಿಯ ಪತನದ ಪ್ರತೀಕವಾಗಿದೆ. ದೇಶದ ಭಾವನೆ ಹೇಗಿದೆ ಎಂದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ವರಿಷ್ಠ ದೇವೇಗೌಡ ಅವರ ಜೋಡಿಯನ್ನು ಸ್ವೀಕರಿಸಲು ಸಿದ್ಧ, ಆದರೆ ಪ್ರಧಾನಿ ಮೋದಿ, ಅಮಿತ್ ಶಾ ಜೋಡಿಯನ್ನಲ್ಲ ಎಂಬುದು ಕರ್ನಾಟಕ ಚುನಾವಣೆಯಿಂದ ಸ್ಪಷ್ಟವಾಗಿದೆ ಎಂದು ರಾವತ್ ಹೇಳಿದ್ದಾರೆ.
SCROLL FOR NEXT