ನವದೆಹಲಿ; ದೇಶದಾದ್ಯಂತ ಭಾರೀ ಸುದ್ದಿ ಹಾಗೂ ಚರ್ಚೆಗೆ ಗ್ರಾಸವಾಗಿದ್ದ ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಮಂಗಳವಾರ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರಿಗೆ ಸಮನ್ಸ್ ಜಾರಿ ಮಾಡಿದೆ.
ಶಶಿ ತರೂರ್ ಅವರು ಸುನಂದಾ ಅವರ ಪತಿಯಾಗಿದ್ದು, ಪತ್ನಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರಣೆ ನೀಡಿದ ಆರೋಪವನ್ನು ಶಶಿ ತರೂರ್ ಅವರು ಎದುರಿಸುತ್ತಿದ್ದಾರೆ. ಪ್ರಕರಣದ ಚಾರ್ಜ್ ಶೀಟ್ ನಲ್ಲಿಯೂ ಶಶಿ ತರೂರ್ ಅವರ ಹೆಸರನ್ನು ಈ ಹಿಂದೆ ದೆಹಲಿ ಪೊಲೀಸರು ಸೇರ್ಪಡೆಗೊಳಿಸಿದ್ದರು.
ಇದೀಗ ಪ್ರಕರಣ ಸಂಬಂಧ ಶಶಿ ತರೂರ್ ಅವರಿಗೆ ದೆಹಲಿ ಪಾಟಿಯಾಲಾ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದ್ದು, ಜೂಲೈ.7ರೊಳಗಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ ಎಂದು ತಿಳಿದುಬಂದಿದೆ.
ಶಶಿ ತರೂರ್ ಅವರು ಸುನಂದಾರನ್ನು 2010ರಲ್ಲಿ ಮದುವೆಯಾಗಿದ್ದರು. ಸುನಂದಾ ಪುಷ್ಕರ್ ಅವರು 2014 ಜನವರಿ 17ರಂದು ದೆಹಲಿಯ ಹೊಟೇಲೊಂದರ ಕೊಠಡಿಯೊಂದರಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು.
ಕಳೆದ ವರ್ಷ ಜನವರಿಯಲ್ಲಿ ಸುನಂದಾ ಅವರ ಸಾವಿನ ಕುರಿತಂತೆ ದೆಹಲಿ ಪೊಲೀಸರು ಕೊಲೆ ಪ್ರಕರಣವೊಂದನ್ನು ದಾಖಲಿಸಿದ್ದರು. ವಿಷಸೇವನೆಯಿಂದ ಸಾವು ಸಂಭವಿಸಿದೆ ಎಂದು ಅಖಿಲ ಭಾರತ ವೈದ್ಯಕೀಯ ಮಂಡಳಿ ವರದಿ ನೀಡಿದ್ದು, ಸುನಂದಾ ಅವರ ಒಳಾಂಗಗಳ ಮಾದರಿಯ ಸ್ಯಾಂಪಲ್ ನ್ನು ಪರೀಕ್ಷೆಗೆ ವಾಷಿಂಗ್ಟನ್ ನ ಪ್ರಯೋಗಾಲಯಕ್ಕೆ ಪೊಲೀಸರು ಕಳುಹಿಸಿದ್ದರು.
ಪ್ರಕರಣ ಸಂಬಂಧ ಶಶಿತರೂರ್ ವಿರುದ್ದ ಸಾಕಷ್ಟು ಅನುಮಾನಗಳು ಮೂಡತೊಡಗಿದ್ದವು. ಪತ್ನಿ ಸಾವು ಕುರಿತು ಹೇಳಿಕೆ ನೀಡುತ್ತಿದ್ದ ಶಶಿ ತರೂರ್ ಅವರು, ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ಯಾವುದೇ ರೀತಿಯ ಅನ್ಯಾಯವಾಗಿಲ್ಲ ಎಂದು ತನಿಖೆಯುದ್ದಕ್ಕೂ ಹೇಳಿಕೊಂಡು ಬರುತ್ತಿದ್ದರು, ಅಲ್ಲದೆ, ಡ್ರಗ್ಸ್ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು.