ನವದೆಹಲಿ:ದೇಶದಲ್ಲಿ ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಹಲವು ಕ್ರಮ ಕೈಗೊಳ್ಳಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ಸಣ್ಣ ಪಟ್ಟಣ ಮತ್ತು ಹಳ್ಳಿಗಳು ಕೂಡ ಉದ್ಯಮಗಳ ಆರಂಭಿಕ ಕೇಂದ್ರಗಳಾಗಿ ಮಾರ್ಪಡುತ್ತಿವೆ ಎಂದರು. ಇಂದು ದೆಹಲಿಯಲ್ಲಿ ಅವರು ದೇಶದ ವಿವಿಧ ಭಾಗಗಳ ಯುವ ಉದ್ಯಮಶೀಲರ ಜೊತೆ ಸಂವಾದ ನಡೆಸಿದರು.
ಮೇಕ್ ಇನ್ ಇಂಡಿಯಾದಂತೆ ಡಿಸೈನ್ ಇನ್ ಇಂಡಿಯಾ ಸಹ ಸ್ಟಾರ್ಟ್ ಅಪ್ ಉದ್ಯಮಗಳಿಗೆ ಮುಖ್ಯವಾಗಿವೆ. ಸರಿಯಾದ ಬಂಡವಾಳ, ಧೈರ್ಯ ಮತ್ತು ಜನರೊಂದಿಗೆ ಸಂಪರ್ಕ ಸ್ಟಾರ್ಟ್ ಅಪ್ ವಲಯಗಳ ಅದ್ವಿತೀಯ ಸಾಧನೆಗಳಿಗೆ ಅಗತ್ಯವಾಗಿರುತ್ತವೆ ಎಂದರು.
ಸ್ಟಾರ್ಟ್ ಅಪ್ ಎಂದರೆ ಡಿಜಿಟಲ್ ಮತ್ತು ತಾಂತ್ರಿಕ ಸಂಶೋಧನೆಗಳೆಂದು ಒಂದು ಸಮಯದಲ್ಲಿ ಭಾವಿಸಲಾಗುತ್ತಿತ್ತು. ಆದರೆ ಇಂದು ಪರಿಸ್ಥಿತಿಗಳು ಬದಲಾಗುತ್ತಿದ್ದು ಕೃಷಿ ವಲಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇಂದು ಸ್ಟಾರ್ಟ್ ಅಪ್ ನೋಡುತ್ತಿದ್ದೇವೆ ಎಂದರು.
ನಾವು ಅಗ್ರಿಕಲ್ಚರ್ ಗ್ರಾಂಡ್ ಚಾಲೆಂಜ್ ನ್ನು ಆರಂಭಿಸಿದ್ದೇವೆ. ಕೃಷಿವಲಯಗಳನ್ನು ಹೇಗೆ ರೂಪಾಂತರ ಮಾಡಬಹುದು ಎಂದು ಉಪಾಯಗಳನ್ನು ಪಡೆದುಕೊಳ್ಳಲು ನಾವು ಹೆಚ್ಚೆಚ್ಚು ಯುವಜನತೆಯನ್ನು ಆಹ್ವಾನಿಸಿದ್ದೇವೆ ಎಂದು ಪ್ರಧಾನಿ ಹೇಳಿದರು.
ದೇಶದಲ್ಲಿ ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಸರ್ಕಾರ ಸ್ಟಾರ್ಟ್ ಅಪ್ ಇಂಡಿಯಾ ಕಾರ್ಯ ಯೋಜನೆಯನ್ನು ಆರಂಭಿಸಿದೆ. ತೆರಿಗೆ ರಜೆ, ಇನ್ಸ್ ಪೆಕ್ಟರ್ ರಾಜ್ ಮುಕ್ತ ಆಡಳಿತ ಮತ್ತು ಬಂಡವಾಳ ಸಂಗ್ರಹಣೆ ತೆರಿಗೆ ವಿನಾಯ್ತಿ ನೀಡುವ ಉದ್ದೇಶ ಈ ಕಾರ್ಯ ಯೋಜನೆಯದ್ದಾಗಿದೆ. ಸ್ಟಾರ್ಟ್ ಅಪ್ ಯಾವಾಗಲೂ ಬೆಳವಣಿಗೆಯ ಎಂಜಿನ್ ಗಳಾಗಿರುತ್ತವೆ. ಇಂದು ದೊಡ್ಡ ಮಟ್ಟದ ಕಂಪೆನಿಗಳು ಒಂದು ಸಮಯದಲ್ಲಿ ಸ್ಟಾರ್ಟ್ ಅಪ್ ಗಳಾಗಿದ್ದವು. ಜನರು ಹೊಸ ಹೊಸ ಸಂಶೋಧನೆಗಳನ್ನು ಮಾಡುತ್ತಿರಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತದಲ್ಲಿ ಇಂದು ಯುವಕರು ಉದ್ಯೋಗ ಸೃಷ್ಟಿಸುತ್ತಿದ್ದು ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಲಾಭಾಂಶ ಮಾಡಿಕೊಳ್ಳಲು ಬದ್ಧವಾಗಿದೆ. ಸ್ಟಾರ್ಟ್ ಅಪ್ ಉದ್ಯಮಿಗಳಿಗೆ ಸರ್ಕಾರ 10,000 ಕೋಟಿ ರೂಪಾಯಿ ಹಣ ಸಂಗ್ರಹಿಸಿದೆ. ಸ್ಟಾರ್ಟ್ ಅಪ್ ಗಳು ತಮ್ಮ ಉತ್ಪನ್ನಗಳನ್ನು ಸರ್ಕಾರಕ್ಕೆ ಮಾರಾಟ ಮಾಡಬಹುದು. ಇದಕ್ಕಾಗಿ ಸಾರ್ವಜನಿಕ ಸಂಗ್ರಹ ನಿಯಮವನ್ನು ಸರಳಗೊಳಿಸಲಾಗಿದೆ. ಜಾಗತಿಕ ಸ್ಟಾರ್ಟ್ ಅಪ್ ಪೂರಕ ವ್ಯವಸ್ಥೆಯಲ್ಲಿ ಭಾರತ ಅದ್ವಿತೀಯ ಸಾಧನೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.