ನವದೆಹಲಿ; ನಟ ರಜನಿಕಾಂತ್ ಅಭಿನಯದ ಕಾಳಾ ಚಿತ್ರ ಬಿಡುಗಡೆಗೆ ತಡೆ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ತಳ್ಳಿಹಾಕಿದೆ.
ಕಾಳಾ ಚಿತ್ರ ಬಿಡುಗಡೆಗೆ ತಡೆ ನೀಡಬೇಕೆಂದು ಕೋರಿ ಕೆ.ಎಸ್. ರಾಜಶೇಖರನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಇಂದು ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಎ.ಕೆ.ಗೋಯಲ್ ಮತ್ತು ಅಶೋಕ್ ಭೂಷಣ್ ಅವರಿದ್ದ ಪೀಠ, ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಚಿತ್ರ ಬಿಡುಗಡೆಗೆ ತಡೆ ನೀಡಬೇಕೆಂದು ನೀವು ಬಯಸುತ್ತಿದ್ದೀರಿ. ಆದರೆ, ಚಿತ್ರ ಬಿಡುಗಡೆಗಾಗಿ ಪ್ರತೀಯೊಬ್ಬರೂ ಕಾದು ಕುಳಿತಿದ್ದಾರೆ. ಇಂತಹ ಸಂದರ್ಭದಲ್ಲಿ ಚಿತ್ರ ಬಿಡುಗಡೆಗೆ ತಡೆ ನೀಡಲು ಸಾಧ್ಯವಿಲ್ಲ. ಚಿತ್ರ ಬಿಡುಗಡೆ ವಿಚಾರದಲ್ಲಿ ಮಧ್ಯೆ ಪ್ರವೇಶಿಸುವುದಿಲ್ಲ ಎಂದು ಹೇಳಿದ್ದಾರೆ.
ಅನುಮತಿಯಿಲ್ಲದೆಯೇ ಚಿತ್ರದಲ್ಲಿ ನನ್ನ ಕಥೆಯನ್ನು ಬಳಸಿಕೊಳ್ಳಲಾಗಿದೆ. ಚಿತ್ರದ ಹಾಡುಗಳಿಗೆ ಕೃತಿಸ್ವಾಮ್ಯವಿದ್ದು, ಅನುಮತಿಯಿಲ್ಲದೆಯೇ ನಿರ್ಮಾಪಕರು ನನ್ನ ಬಳಸಿಕೊಂಡಿದ್ದಾರೆಂದು ಹೇಳಿ ರಾಜಶೇಖರನ್ ಎಂಬುವವರು ಮೇ.16 ರಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯಲ್ಲಿ ಜೂನ್.16ರಂದು ಬಿಡುಗಡೆಯಾಗಲಿರುವ ಕಾಳಾ ಚಿತ್ರಕ್ಕೆ ತಡೆ ನೀಡಬೇಕೆಂದು ನ್ಯಾಯಾಲಯದ ಬಳಿ ಮನವಿ ಮಾಡಿಕೊಂಡಿದ್ದರು.
ಕಾಳಾ ಚಿತ್ರ ಜೂನ್.7 ರಂದು ಬಿಡುಗಡೆಗೊಳ್ಳುತ್ತಿದ್ದು, ಕಾವೇರಿ ವಿವಾದ ಸಂಬಂಧ ರಜನಿಕಾಂತ್ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಕನ್ನಡ ಪರ ಸಂಘಟನೆಗಳು ಚಿತ್ರ ಪ್ರದರ್ಶನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ಈ ಹಿನ್ನಲೆಯಲ್ಲಿ ಚಿತ್ರದ ನಿರ್ಮಾಣ ಸಂಸ್ಥೆಯಾದ ವೆಂಡರ್'ಬರ್ ಫಿಲಂ ಪ್ರೈವೇಟ್ ಲಿಮಿಟೆಡ್ ಹಾಗೂ ನಿರ್ಮಾಪಕರಾದ ನಟ ರಜನಿಕಾಂತ್ ಪುತ್ರಿ ಐಶ್ವರ್ಯ ಹಾಗೂ ಅಳಿಯ ಧನುಷ್ ಅವರು ಹೈಕೋರ್ಟ್'ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ರಾಜ್ಯದೆಲ್ಲೆಡೆ ಚಿತ್ರ ಬಿಡುಗಡೆಗೆ ಸೂಕ್ತ ಭದ್ರತೆ ನೀಡಲು ಸರ್ಕಾರ ಹಾಗೂ ರಾಜ್ಯ ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿದ್ದರು.
ಈ ಅರ್ಜಿಯನ್ನು ನಿನ್ನೆ ವಿಚಾರಣೆ ನಡೆಸಿದ ನ್ಯಾಯಾಲಯ ರಾಜ್ಯದಲ್ಲಿ ಕಾಲಾ ಚಿತ್ರವನ್ನು ಪ್ರದರ್ಶಿಸುವ ಪ್ರದೇಶ ಮತ್ತು ಚಿತ್ರದ ಪ್ರದರ್ಶನಕ್ಕೆ ಅಡ್ಡಿಪಡಿಸಲಿರುವ ಸಂಘಟನೆಗಳ ವ್ಯಕ್ತಿಗಳ ಬಗ್ಗೆ ವಿವರ ಸಲ್ಲಿಸುವಂತೆ ಹಾಗೂ ಚಿತ್ರಪ್ರದರ್ಶನಕ್ಕೆ ಯಾವುದೇ ರೀತಿಯ ಅಡಚಣೆಗಳಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿತ್ತು.