ಪ್ರಣಬ್ ಮುಖರ್ಜಿ ಅವರ ತಿರುಚಿದ ಫೋಟೋ
ನವದೆಹಲಿ: 'ನಿಮಗೆ ಮೊದಲೇ ಹೇಳಿದ್ದೆ, ಆರ್ ಎಸ್ ಎಸ್ ಕಾರ್ಯಕ್ರಮಕ್ಕೆ ಹೋಗಬೇಡಿ ಎಂದು.. ಈಗ ನೋಡಿ ಏನಾಗಿದೆ' ಎಂದು ಪ್ರಣಬ್ ಮುಖರ್ಜಿ ಪುತ್ರಿ ಶರ್ಮಿಷ್ಟಾ ಮುಖರ್ಜಿ ತಮ್ಮ ತಂದೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ಶರ್ಮಿಷ್ಟಾ, ನೋಡಿ.. ನಿನ್ನೆ ಆರ್ ಎಸ್ ಎಸ್ ಕಾರ್ಯಕ್ರಮಕ್ಕೆ ಹೋಗಬೇಡಿ.. ಕಾರ್ಯಕ್ರಮಕ್ಕೆ ಹೋಗುವ ಮೂಲಕ ನಿಮ್ಮ ಬಗ್ಗೆ ಇಲ್ಲ ಸಲ್ಲದ ಆರೋಪಗಳ ಮಾಡಲು, ಗಾಸಿಪ್ ಗಳಿಗೆ ನೀವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದ್ದೆ. ಆದರೂ ನೀವು ಮಾತು ಲೆಕ್ಕಿಸದೇ ಹೋದಿರಿ.. ಇದೀಗ ನಿಮ್ಮ ಫೋಟೋವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ನನಗೆ ಯಾವ ಭಯವಿತ್ತೋ ಅದು ಇಂದು ನಿಜವಾಗಿದೆ. ಕಾರ್ಯಕ್ರಮ ಮುಕ್ತಾಯವಾದ ಕೆಲವೇ ಗಂಟೆಗಳಲ್ಲಿ ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎಂದು ಶರ್ಮಿಷ್ಟಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ನಿನ್ನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ ಭಾಗವಹಿಸಿದ್ದರು. ಈ ಕುರಿತು ಚಿತ್ರಗಳನ್ನು ಪಡೆದ ಕೆಲ ಕಿಡಿಗೇಡಿಗಳು ಪ್ರಣಬ್ ಆರ್ ಎಸ್ ಎಸ್ ಸಮವಸ್ತ್ರ ಧರಿಸಿರುವಂತೆ ಫೋಟೋಶಾಪ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಫೋಟೋ ಇದೀಗ ವೈರಲ್ ಆಗುತ್ತಿದೆ.
ಸುಬ್ರಮಣಿಯನ್ ಸ್ವಾಮಿಗೆ ತಿರುಗೇಟು
ಇನ್ನು ಇದೇ ವೇಳೆ ನಿನ್ನೆಯ ಟ್ವೀಟ್ ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು, ನನ್ನ ಮಗಳು ಕೂಡ ಚರ್ಚೆ ಮಾಡುತ್ತಿರುತ್ತಾಳೆ. ಅವರ ಆಲೋಚನಾ ಲಹರಿಗೂ ನನ್ನ ಆಲೋಚನಾ ಲಹರಿಗೂ ಅಜಗಜಾಂತರ ವ್ಯತ್ಯಾಸವಿದೆ. ನನ್ನ ಸ್ವಂತ ಮಗಳೇ ನನ್ನ ಮಾತು ಕೇಳುವುದಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಗೆ ಇಂದು ಪ್ರತಿಕ್ರಿಯೆ ನೀಡಿರುವ ಶರ್ಮಿಷ್ಟಾ, ಹೌದು.. ನಾನು ಕೂಡ ಹಾಗೆಯೇ ಬೆಳೆದಿದ್ದು. ನನ್ನ ಭಾವನೆಗಳನ್ನು ನಾನು ಯಾವುದೇ ಮುಚ್ಚು ಮರೆ ಇಲ್ಲದೆ ಮುಜುಗರವಿಲ್ಲದೆ ಸಾರ್ವಜನಿಕವಾಗಿಯೇ ವ್ಯಕ್ತಪಡಿಸುತ್ತೇನೆ. ನಾವು ಪ್ರಜಾಪ್ರಭುತ್ವ ವಾದಿಗಳು. ನಮ್ಮದು ಚರ್ಚೆ ಮಾಡದೇ ಯಾವುದೇ ನಿರ್ಧಾರ ಕೈಗೊಳ್ಳದ ಕುಟುಂಬ, ಚರ್ಚೆ ಮಾಡುವ ನನ್ನ ಗುಣ ನಮ್ಮ ತಂದೆಯಿಂದ ಬಂದಿದ್ದು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos