ಬಾಲಿವುಡ್ ನಟ ಸಂಜಯ್ ದತ್ ಭೇಟಿಯಾದ ಯೋಗಿ ಆದಿತ್ಯನಾಥ್
ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಬಾಲಿವುಡ್ ನಟ ಸಂಜಯ್ ದತ್ ಅವರನ್ನು ಭೇಟಿಯಾಗಿದ್ದಾರೆ. ಲಖನೌದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ’ಸಂಪರ್ಕ್ ಫಾರ್ ಸಮರ್ಥನ್’ ಕಾರ್ಯಕ್ರಮದಲ್ಲಿ ಸಂಜಯ್ ದತ್ ಭಾಗವಹಿಸಿದ್ದರು.
ಯೋಗಿ ಆದಿತ್ಯನಾಥ್ ಅಧಿಕೃತ ನಿವಾಸದಲ್ಲಿ ನಡೆದ ಈ ಭೇಟಿಯ ವೇಳೆ ಮೋದಿ ಸರ್ಕಾರದ ನಾಲ್ಕು ವರ್ಷದ ಸಾಧನೆಯನ್ನು ಬಿಂಬಿಸುವ ಕಿರು ಹೊತ್ತಿಗೆಯೊಂಡನ್ನು ಉತ್ತರ ಪ್ರದೇಶ ಮುಖ್ಯಮಂತ್ರಿಗಳು ಸಂಜಯ್ ದತ್ ಅವರಿಗೆ ನೀಡಿದ್ದಾರೆ.
ಕೇಂದ್ರದ ಮೋದಿ ಸರ್ಕಾರ ನಾಲ್ಕು ವರ್ಷ ಸಂಪೂರ್ಣಗೊಳಿಸಿದ ಹಿನ್ನೆಲೆಯಲಿ ಬಿಜೆಪಿ ರಾಷ್ತಾಧ್ಯಕ್ಷ ಅಮಿತ್ ಶಾ ಮೇ 29 ರಂದು 'ಸಂಪರ್ಕ್ ಫಾರ್ ಸಮರ್ಥನ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಎನ್ ಡಿಎ ಸರ್ಕಾರದ ನಾಲ್ಕು ವರ್ಷಗಳ ಸಾಧನೆಯನ್ನು ಪರಿಚಯಿಸುವ ಕಾರ್ಯಕ್ರಮ ಇದಾಗಿದ್ದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಉದ್ಯಮಿ ರತನ್ ಟಾಟಾ, ಬಾಲಿವುಡ್ ನಟಿಮಾಧುರಿ ದೀಕ್ಷಿತ್, ಶಿರೋಮಣಿ ಅಕಾಲಿ ದಳದ ನಾಯಕ ಪ್ರಕಾಶ್ ಸಿಂಗ್ ಬಾದಲ್ ಮತ್ತು ಕ್ರೀಡಾಪಟು ಮಿಲ್ಕಾ ಸಿಂಗ್ ಸೇರಿದಂತೆ ಹಲವು ನಾಯಕರನ್ನು ಅಮಿತ್ ಶಾ ಇದುವರೆವಿಗೆ ಭೇಟಿಯಾಗಿದ್ದು ಸಹ ಇದೇ ಕಾರ್ಯಕ್ರಮದ ಒಂದು ಭಾಗವಾಗಿತ್ತು.
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಸಹ ಶುಕ್ರವಾರದಂದು ಚಲನಚಿತ್ರ ನಟ ಮತ್ತು ಚಿತ್ರಲೇಖಕ ಸಲೀಂ ಖಾನ್ ಮತ್ತು ನಟ ಸಲ್ಮಾನ್ ಖಾನ್ ಅವರನ್ನು ಇದೇ ಉಪಕ್ರಮದಲ್ಲಿ ಭೇಟಿಯಾದರು.