ದೇಶ

ಜೆಇಇ ಅಡ್ವಾನ್ಸ್‌ ಫಲಿತಾಂಶ: ಹರಿಯಾಣದ ವಿದ್ಯಾರ್ಥಿ ಪ್ರಣವ್‌ ದೇಶಕ್ಕೆ ಮೊದಲ ರ್‍ಯಾಂಕ್‌

Raghavendra Adiga
ನವದೆಹಲಿ: ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಭಾನುವಾರ ಜೆಇಇ ಅಡ್ವಾನ್ಸ್‌ (ಜಂಟಿ ಪ್ರವೇಶ ಪರೀಕ್ಷೆ) ಫಲಿತಾಂಶ ಪ್ರಕಟಿಸಿದೆ. ಹರಿಯಾಣ ಪಂಚಕುಲದ ವಿದ್ಯಾರ್ಥಿ ಪ್ರಣವ್ ಗೋಯಲ್ 360ಕ್ಕೆ 337 ಅಂಕಗಳನ್ನು ಪಡೆದು ದೇಶಕ್ಕೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾನೆ.
ಐಐಟಿ ಕಾನ್ಪುರ ಏರ್ಪಡಿಸಿದ್ದ ಈ ವರ್ಷದ ಪರೀಕ್ಷೆಯಲ್ಲಿ ದೇಶದಾದ್ಯಂತ 1,55,158 ವಿದ್ಯಾರ್ಥಿಗಳುಭಾಗವಹಿಸಿದ್ದರು. ದೇಶದಲ್ಲಿನ 23 ಐಐಟಿಗಳಿಂದ ಒಟ್ಟು 11,279 ಸೀಟುಗಳಿಗಾಗಿ ಈ ಪರೀಕ್ಷೆ ನಡೆದಿತ್ತು. ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳಲ್ಲಿ 18,138 ಮಂದಿ ಅರ್ಹತೆ ಗಿಟ್ಟಿಸಿದ್ದಾರೆ. ಮೇ 20ರಂದು ಈ ವರ್ಷದ ಜೆಇಇ ಪರೀಕ್ಷೆ ನಡೆದಿತ್ತು. 
ಇನ್ನು ಈ ವರ್ಷದ ಪರೀಕ್ಷೆಗಳಲ್ಲಿ ಕೋಟಾದ ಸಾಹಿಲ್‌ ಜೈನ್‌ ಎರಡನೇ, ದೆಹಲಿಯ ಕಳಶ್‌ ಗುಪ್ತ ಮೂರನೇ ಸ್ಥಾನ ಗಿಟ್ಟಿಸಿದ್ದಾರೆ.
360ರಲ್ಲಿ 318 ಅಂಕ ಪಡೆದ ಕೋಟಾದ ಮಿನಾಲ್‌ ಪ್ರಕಾಶ್‌ ವಿದ್ಯಾರ್ಥಿನಿಯರ ಪೈಕಿ ಪ್ರಥ್ಮ ಸ್ಥಾನ ಗಳಿಸಿದ್ದಾರೆ.
ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದ್ದು ಜೂನ್ 15 ರಿಂದ ಸೀಟು ಹಂಚಿಕೆ ಪ್ರಾರಂಭವಾಗಲಿದೆ. ಇದೇ ಪ್ರಥಮ ಬಾರಿಗೆ ಜೆಇಇ ಅಡ್ವಾನ್ಸ್‌ ಸಂಪೂರ್ಣವಾಗಿ ಆನ್ ಲೈನ್ ಮಾದರಿಯಲ್ಲಿ ನಡೆದದ್ದು ವಿಶೇಷವಾಗಿತ್ತು.
ಭಾರತದಲ್ಲಿರುವ ಎಲ್ಲಾ ಐಐಟಿಗಳು, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಐಐಎಸ್‌ಇಆರ್‌) ಹಾಗೂ ರಾಜೀವ್‌ಗಾಂಧಿ ಪೆಟ್ರೋಲಿಯಂ ತಂತ್ರಜ್ಞಾನ ಸಂಸ್ಥೆಗಳ(ಆರ್‌ಜಿಐಪಿಟಿ) ಪ್ರವೇಶಕ್ಕೆ ಈ ಪರೀಕ್ಷೆಯಲ್ಲಿ ಮೆರಿಟ್ ಅಂಕಗಳನ್ನು ಗಳಿಸಿರಬೇಕಾಗುತದೆ.
SCROLL FOR NEXT