ಲಾಲು ಪ್ರಸಾದ್ ಯಾದವ್ ಹುಟ್ಟು ಹಬ್ಬ
ಪಾಟ್ನಾ: ಬಹುಕೋಟಿ ವೇವು ಹಗರಣದಲ್ಲಿ ಜೈಲು ಪಾಲಾಗಿರುವ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಸೋಮವಾರ 70ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಪುತ್ರರಾದ ತೇಜಶ್ವಿ ಯಾದವ್ ಹಾಗೂ ತೇಜ್ ಪ್ರತಾಪ್ ಯಾದವ್ ಜತೆಯಾಗಿ ತಂದೆಯ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ತೇಜ್ ಪ್ರತಾಪ್ ಮತ್ತು ತೇಜಶ್ವಿ, ತಾಯಿ ರಾಬ್ರಿ ದೇವಿ ಜತೆ ಸೇರಿ 70 ಕೆಜಿಯ ಕೇಕ್ ಅನ್ನು ಕಟ್ ಮಾಡುವ ಮೂಲಕ ಲಾಲು ಅವರ ಜನ್ಮ ದಿನವನ್ನು ಆಚರಿಸಿದರು. ಕಾರ್ಯಕ್ರಮದಲ್ಲಿ ಆರ್ ಜೆಡಿ ಮುಖರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಬಿಹಾರ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್ ಅವರು, ತೇಜಶ್ವಿ ಜತೆ ಯಾವುದೇ ವೈಮನಸ್ಯಗಳಿಲ್ಲ. ನಾವಿಬ್ಬರು ಚೆನ್ನಾಗಿದ್ದೇವೆ ಎಂದರು.
ಎರಡು ದಿನಗಳ ಹಿಂದಷ್ಟೇ ತೇಜ್ ಪ್ರತಾಪ್ ಯಾದವ್ ಸಹೋದರ ತೇಜಸ್ವಿ ಹಾಗೂ ಕೆಲ ಆರ್ ಜೆಡಿ ಮುಖಂಡರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಮೇವು ಹಗರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಲಾಲು ಯಾದವ್ ಅವರು ಪ್ರಸ್ತುತ ಪರೋಲ್ ಮೇಲೆ ಬಿಡುಗಡೆಯಾಗಿದ್ದಾರೆ.
2017ರ ಡಿಸೆಂಬರ್ 23ರಿಂದ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ ಲಾಲು ಈಚೆಗೆ ಅನಾರೋಗ್ಯದ ಪ್ರಯುಕ್ತ ರಾಂಚಿ ಮತ್ತು ಅನಂತರ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅದಕ್ಕೆ ಮೊದಲು ಮಗನ ಮದುವೆಗೆಂದು ಮತ್ತು ಅನಂತರ ವೈದ್ಯಕೀಯ ನೆಲೆಯಲ್ಲಿ ಪೆರೋಲ್ ಪಡೆದಿದ್ದರು.