ಚಂಡೀಗಢ: ಹಿರಿಯ ಅಧಿಕಾರಿಗಳು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಹರಿಯಾಣದ ಯುವ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಸೋಮವಾರ ಆರೋಪ ಮಾಡಿದ್ದಾರೆ.
ಈ ಕುರಿತಂತೆ ಯುವ ಐಎಎಸ್ ಅಧಿಕಾರಿ ಸಾಮಾಜಿಕ ಜಾಲತಾಣದಲ್ಲಿ ಮೇ.31 ರಂದು ಬರೆದುಕೊಂಡಿದ್ದು, ಅಧಿಕಾರಿಯ ಈ ಪೋಸ್ಟ್ ಇದೀಗ ಹಲವು ಚರ್ಚೆ ಹಾಗೂ ಸುದ್ದಿಗಳಿಗೆ ಗ್ರಾಸವಾಗಿದೆ.
ಹಿರಿಯ ಅಧಿಕಾರಿ ನನ್ನೊಂದಿಗೆ ದ್ವಂದ್ವಾರ್ಥದ ಮಾತುಗಳನ್ನಾಡಿದ್ದರು. ಅಲ್ಲದೆ, ನನ್ನ ವಾರ್ಷಿಕ ಗೌಪ್ಯ ವರದಿಯನ್ನು ಹಾಳು ಮಾಡುವುದಾಗಿ ಬೆದರಿಕೆಗಳನ್ನು ಹಾಕಿದರು. ಹೊಸದಾಗಿ ಮದುವೆಯಾಗಿರುವ ವಧುವಿನಂತೆ ನೀನು ಎಲ್ಲವನ್ನು ವಿವರಿಸಬೇಕು ನಾನು ಹಾಗೆಯೇ ಹೇಳಿಕೊಡುತ್ತೇನೆಂದು ಅವರು ಹೇಳಿದ್ದರು ಎಂದು ಹೇಳಿಕೊಂಡಿದ್ದಾರೆ.
ಇದಾದ ಬಳಿಕ ಜೂನ್.6 ರಂದು ಮತ್ತೆ ತಮ್ಮ ಕಚೇರಿಗೆ ಕರೆಸಿಕೊಂಡಿದ್ದ ಅಧಿಕಾರಿಯು ತಮ್ಮ ಬಳಿ ಅನುಚಿತವಾಗಿ ವರ್ತಿಸಿದ್ದರು. ಸಂಜೆ 5ಕ್ಕೆ ಕಚೇರಿಗೆ ಕರೆಸಿಕೊಂಡು 7.39ರವರೆಗೂ ಅಲ್ಲಿ ಇರಲು ಹೇಳಿದ್ದರು ಎಂದು ಆರೋಪಿಸಿದ್ದಾರೆ.
ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪವನ್ನು ಹಿರಿಯ ಐಎಎಸ್ ಅಧಿಕಾರಿ ತಿರಸ್ಕರಿಸಿದ್ದು, ಆರೋಪ ಆಧಾರರಹಿತವಾದದ್ದು. ಪ್ರತೀ ಕಡತದ ಮೇಲೆಯೂ ನಕಾರಾತ್ಮಕವಾದ ಪ್ರತಿಕ್ರಿಯೆಗಳನ್ನು ನೀಡುವುದು ಬೇಡ. ಇತರೆ ಅಧಿಕಾರಿಗಳಿಂದ ಎಲ್ಲಾ ಅಗತ್ಯ ಅನುಮೋದನೆ ದೊರೆತ ಕಡತಗಳಲ್ಲಿ ತಪ್ಪುಗಳನ್ನು ಹುಡುಕಲು ಹೋಗಬೇಡಿ. ಈ ವರ್ತನೆಯ ಕಾರಣದಿಂದ ಹಿರಿಯ ಆಧಿಕಾರಿಗಳು ನಿಮ್ಮ ವೃತ್ತಿಗೆ ಸಮಸ್ಯೆಗಳನ್ನುಂಟು ಮಾಡಬಹುದು ಎಂದು ವೃತ್ತಿಗೆ ಹೊಸಬರಾಗಿದ್ದರಿಂದಾಗಿ ಸಲಹೆಗಳನ್ನು ನೀಡಿದ್ದೆ ಅಷ್ಟೇ ಎಂದು ಹೇಳಿದ್ದಾರೆ.