ಭಿಲಾಯಿ(ಛತ್ತೀಸಗಡ): ಎಲ್ಲಾ ರೀತಿಯ ಹಿಂಸಾಚಾರ ಮತ್ತು ಪಿತೂರಿಗೆ ಅಭಿವೃದ್ಧಿಯೊಂದೇ ಉತ್ತರ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ನಕ್ಸಲರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.
ಇಂದು ಛತ್ತೀಸಘಡದಲ್ಲಿ ಸುಮಾರು 22 ಸಾವಿರ ಕೋಟಿ ರುಪಾಯಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಮೋದಿ, ತಮ್ಮ ಸರ್ಕಾರ ‘ವಿಶ್ವಾಸದ ವಾತಾವರಣ’ವನ್ನು ಸೃಷ್ಟಿಸುತ್ತಿದೆ ಎಂದರು.
ಬಿಲಾಯಿ ಸ್ಟೀಲ್ ಪ್ಲಾಂಟ್ ವಿಸ್ತರಣೆ 'ನವ ಭಾರತ' ನಿರ್ಮಾಣಕ್ಕೆ ಶಕ್ತಿ ನೀಡಲಿದೆ. ಬಿಲಾಯಿ ಕೇವಲ ಸ್ಟೀಲ್ ಅನ್ನು ಮಾತ್ರ ನಿರ್ಮಾಣ ಮಾಡುವುದಿಲ್ಲ, ಜತೆಗೆ ಇಲ್ಲಿನ ಜೀವನ, ಸಮಾಜ ಮತ್ತು ದೇಶ ನಿರ್ಮಾಣ ಮಾಡಲಿದೆ ಎಂದರು.
ಇದೇ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಅಭಿವೃದ್ಧಿಕಾರ್ಯಗಳ ಪಟ್ಟಿ ಮಾಡಿದ ಪ್ರಧಾನಿ ಮೋದಿ, ಯಾವುದೇ ರೀತಿಯ ಹಿಂಸಾಚಾರ ಮತ್ತು ಪಿತೂರಿಗಳ ತಡೆಗೆ ಅಭಿವೃದ್ಧಿಯೊಂದೇ ಉತ್ತರವಾಗಬಲ್ಲದು ಎಂದು ನಾನು ಭಾವಿಸಿದ್ದೇನೆ. ಈರೀತಿ ಹೊರಹೊಮ್ಮುವ ನಂಬಿಕೆಯು ಯಾವುದೇ ಬಗೆಯ ಹಿಂಸಾಚಾರವನ್ನು ಕೊನೆಗೊಳಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದಿಂದ ಆಸ್ಪತ್ರೆ, ಶಾಲೆ, ರಸ್ತೆ, ಶೌಚಾಲಯಗಳ ಸೌಲಭ್ಯಕ್ಕಾಗಿ ಛತ್ತೀಸಗಡ ಹೆಚ್ಚುವರಿಯಾಗಿ 3 ಸಾವಿರ ಕೋಟಿ ರುಪಾಯಿ ಅನುದಾನ ಪಡೆದಿದೆ ಎಂದು ಅವರು, ಹಿಂದುಳಿದವರು ಮತ್ತು ಬುಡಕಟ್ಟು ಸಮುದಾಯದವರ ಜೀವನಮಟ್ಟ ಸುಧಾರಣೆ ಮತ್ತು ಆದಾಯ ವೃದ್ಧಿಗೆ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದೆ ಎಂದರು.
ಇಂದು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಇದರಲ್ಲಿ ಜಗದಲ್ಪುರ–ರಾಯಪುರ ನಡುವಿನ ವಿಮಾನ ಸಂಚಾರ ಸೇವೆಯೂ ಒಂದು ಎಂದು ಪ್ರಧಾನಿ ಹೇಳಿದರು.