ಕೊಚ್ಚಿ: ಸರಕು ಸಾಗಣೆ ಹಡಗು ಬೆಂಕಿಗಾಹುತಿ: 22 ಸಿಬ್ಬಂದಿ ಅಪಾಯದಿಂದ ಪಾರು
ಕೊಚ್ಚಿ(ಕೇರಳ): ಎಂವಿ ಎಸ್ಎಸ್ಎಲ್ ಕೋಲ್ಕತ್ತಾ ಹೆಸರಿನ ಸ್ಥಳೀಯ ಸರಕು ಸಾಗಣೆ ಹಡಗೊಂದು ಬೆಂಕಿ ಅವಘಡಕ್ಕೆ ಈಡಾದ ಘಟನೆ ಕೇರಳದ ಕೊಚ್ಚಿ ಸಮೀಪ ನಡೆದಿದೆ.
ಬೆಂಕಿ ಅವಘಡಕ್ಕೀಡಾದ ಹಡಗಿನಲ್ಲಿ ಸಿಬ್ಬಂದಿಗಳು ಸೇರಿ 22 ಮಂದಿ ಇದ್ದುದಾಗಿ ತಿಳಿದುಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಕರಾವಳಿ ರಕ್ಷಣಾ ಪಡೆ ಯೋಧರು ಅವಘಡಕ್ಕೀಡಾದ ಹಡಗಿನತ್ತ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಎಲ್ಲಾ 22 ಜನರನ್ನೂ ರಕ್ಷಿಸಲಾಗಿದೆ.
ನಾಪ್ತಾ’ ಎಂಬ ರಾಸಾಯನಿಕ ಟ್ಯಾಂಕರ್ ಅನ್ನು ಹೊತ್ತೊಯ್ಯುತ್ತಿದ್ದ ಹಡಗಿನಲ್ಲಿ ಕಳೆದ ರಾತ್ರಿ ಸ್ಪೋಟದೊಡನೆ ಬೆಂಕಿ ಕಾಣಿಸಿದೆ. ಹೀಗೆ ಬೆಂಕಿ ಅವಘಡಕ್ಕೀಡಾದ ಮೂರು ತಾಸಿನಲ್ಲಿ ರಕ್ಷಣಾ ಪಡೆ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸಿದ್ದು ಸಧ್ಯ ಯಾವ್ಚ ಜೀವಹಾನಿ ಸಂಭವಿಸಲಿಲ್ಲ.
ಸಮುದ್ರದ ಭಾಗದಲ್ಲಿದ್ದ ಬಲವಾದ ಗಾಳಿಯ ಕಾರಣ ಬೆಂಕಿಯು ಬೇಗನೇ ಹರಡಿದ್ದು ಹಡಗಿನ ಶೇ.70 ಭಾಗ ಸುಟ್ಟು ಹೋಗಿದೆ ಎಂದು ಮೂಲಗಳು ಹೇಳಿದೆ.