ದೇಶ

ಪತ್ರಕರ್ತ ಬುಖಾರಿ ಹತ್ಯೆ: ಕಾಶ್ಮೀರ ಪೊಲೀಸರಿಂದ ಶಂಕಿತ ಆರೋಪಿ ಬಂಧನ

Lingaraj Badiger
ಶ್ರೀನಗರ: 'ರೈಸಿಂಗ್ ಕಾಶ್ಮೀರ್' ದಿನ ಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ಶುಜಾತ್ ಬುಖಾರಿಯ ಹಾಗೂ ಅವರ  ಇಬ್ಬರು ಅಂಗರಕ್ಷಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶುಕ್ರವಾರ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಶಂಕಿತ ಆರೋಪಿ ಜುಬೈರ್ ಖದ್ರಿ ಎಂದು ಗುರುತಿಸಲಾಗಿದೆ ಎಂದು ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ ಸ್ವಯಂ ಪ್ರಕಾಶ್ ಪಾನಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಖಾದ್ರಿ, ಬುಖಾರಿ ಕಾರಿನಲ್ಲಿ ಹತ್ಯೆಯಾಗಿ ಬಿದ್ದಿದ್ದ ಭದ್ರತಾ ಸಿಬ್ಬಂದಿಗಳ ಪಿಸ್ತೂಲ್ ಕೊಂಡೊಯ್ಯುತ್ತಿರುವ ದೃಶ್ಯ ಸಿಸಿಟಿವಿ ದಾಖಲಾಗಿದ್ದು, ಅದನ್ನು ಆಧರಿಸಿ ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅವರು ಪಾನಿ ಹೇಳಿದ್ದಾರೆ.
ಆರೋಪಿಯಿಂದ ಪಿಸ್ತೂಲ್ ಅನ್ನು ಜಪ್ತಿ ಮಾಡಲಾಗಿದ್ದು, ಘಟನೆ ನಡೆದ ಸ್ಥಳದಲ್ಲಿ ಆತ ಹೇಗೆ ಬಂದ ಎಂಬುದರ ಬಗ್ಗೆ ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಹಿರಿಯ ಪತ್ರಕರ್ತನ ಹತ್ಯೆ ಪ್ರಕರಣದ ತನಿಖೆಗಾಗಿ ಕಾಶ್ಮೀರ ಉಪ ಪೊಲೀಸ್ ಮಹಾ ನಿರ್ದೇಶಕ ವಿಕೆ ವೃದ್ದಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ(ಎಸ್ ಐಟಿ) ರಚಿಸಲಾಗಿದೆ ಎಂದು ಪಾನಿ ತಿಳಿಸಿದ್ದಾರೆ.
ಶುಜಾತ್ ಬುಖಾರಿ ಹತ್ಯೆ ಒಂದು ಉಗ್ರರ ದಾಳಿ ಎಂದಿರುವ ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ, ಶೀಘ್ರದಲ್ಲೇ ಇತರೆ ಮೂವರು ಆರೋಪಿಗಳ ಗುರುತು ಪತ್ತೆಹಚ್ಚುವುದಾಗಿ ಹೇಳಿದ್ದಾರೆ.
ಇದಕ್ಕು ಮುನ್ನ ಬುಖಾರಿಯ ಹತ್ಯೆಯ 4ನೇ ಆರೋಪಿಯ ಫೋಟೊವನ್ನು ಜಮ್ಮು-ಕಾಶ್ಮೀರ ಪೊಲೀಸರು ಬಹಿರಂಗಗೊಳಿಸಿದ್ದರು. ಅಲ್ಲದೆ ವ್ಯಕ್ತಿಯ ಫೋಟೋ ಸ್ಪಷ್ಟವಾಗಿ ಕಾಣುತ್ತಿದ್ದು, ಆತನನ್ನು ಗುರುತಿಸಿ ಬಂಧಿಸಲು ಸಾರ್ವಜನಿಕರಿಂದ ನೆರವು ನೀಡಬೇಕು ಎಂದು ಮನವಿ ಮಾಡಿದ್ದರು.
SCROLL FOR NEXT