ದೇಶ

ಆಯುಷ್ಮಾನ್ ಯೋಜನೆಯಡಿ ವಿಮಾ ಕಂಪೆನಿಗಳು ಹಣ ಪಾವತಿ ಮಾಡುವುದು ವಿಳಂಬ ಮಾಡಿದರೆ ದಂಡ: ಕೇಂದ್ರ

Sumana Upadhyaya

ನವದೆಹಲಿ: ಆಯುಷ್ಮಾನ್ ಭಾರತ್ ರಾಷ್ಟ್ರೀಯ ಆರೋಗ್ಯ ರಕ್ಷಣೆ ಯೋಜನೆಯಡಿ ಆರೋಗ್ಯ ಸೇವೆ ಪಡೆದುಕೊಂಡ ರೋಗಿಗಳ ಚಿಕಿತ್ಸೆ ವೆಚ್ಚವನ್ನು ಪಾವತಿ ಮಾಡುವಲ್ಲಿ ವಿಳಂಬ ಮಾಡುವ ವಿಮಾ ಕಂಪೆನಿಗಳಿಗೆ ದಂಡ ವಿಧಿಸುವ ಪ್ರಸ್ತಾವನೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ.

ಈ ಯೋಜನೆಯಡಿ ರೋಗಿಗಳ ಚಿಕಿತ್ಸೆ ವೆಚ್ಚವನ್ನು 15 ದಿನಗಳೊಳಗೆ ವಿಮಾ ಕಂಪೆನಿಗಳು ಭರಿಸದಿದ್ದರೆ ಚಿಕಿತ್ಸೆ ವೆಚ್ಚದ ಶೇಕಡಾ ಒಂದರಷ್ಟು ಬಡ್ಡಿಯನ್ನು ಪ್ರತಿ ವಾರ ಸಂಪೂರ್ಣ ವೆಚ್ಚ ಪಾವತಿಸುವವರೆಗೆ ಕಟ್ಟಬೇಕು ಎಂದು ಹೇಳಿದೆ.

ಸಂಬಂಧಪಟ್ಟ ಆಸ್ಪತ್ರೆಗೆ ವಿಮಾ ಕಂಪೆನಿ ನೇರವಾಗಿ ಹಣ ಪಾವತಿಸಬೇಕಾಗುತ್ತದೆ ಎಂದು ಕಳೆದ ಗುರುವಾರ ಬಿಡುಗಡೆಗೊಳಿಸಿದ ಮಾದರಿ ದಾಖಲೆಯಲ್ಲಿ(ಮಾಡೆಲ್ ಟೆಂಡರ್ ಡಾಕ್ಯುಮೆಂಟ್) ತಿಳಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಅಧಿಕಾರಿಗಳು ಹೇಳಿದ್ದಾರೆ.

ಮಾಡೆಲ್ ಟೆಂಡರ್ ಡಾಕ್ಯುಮೆಂಟ್ ನಲ್ಲಿ  ಆಯುಷ್ಮಾನ್ ಯೋಜನೆಯಡಿ ಬರುವ ವಿಧಾನಗಳ ಪಟ್ಟಿ ಮತ್ತು ಅವುಗಳ ದರಗಳಿರುತ್ತವೆ. ಇದುವರೆಗೆ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೇಂದ್ರ ಸರ್ಕಾರದೊಂದಿಗೆ ಒಡಂಬಡಿಕೆಗೆ ಸಹಿ ಹಾಕಿವೆ. ರಾಷ್ಟ್ರೀಯ ಆರೋಗ್ಯ ರಕ್ಷಣೆ ಯೋಜನೆಯಡಿ ಪ್ರತಿ ಕುಟುಂಬಕ್ಕೆ 5 ಲಕ್ಷದವರೆಗೆ ಚಿಕಿತ್ಸೆಯ ವೆಚ್ಚ ನೀಡಲಾಗುತ್ತದೆ. ವರ್ಷಕ್ಕೆ ಸುಮಾರು 10 ಕೋಟಿ ಕುಟುಂಬಗಳಿಗೆ ಈ ಸೌಲಭ್ಯ ನೀಡಲಾಗುತ್ತಿದೆ.

ದೆಹಲಿ, ಒಡಿಶಾ, ಪಂಜಾಬ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಂದ ಇದುವರೆಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಈ ರಾಜ್ಯಗಳೊಂದಿಗೆ ಮಾತುಕತೆ ನಡೆಯುತ್ತಿವೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಯೋಜನೆಯನ್ನು ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದು ಘೋಷಿಸುವ ಸಾಧ್ಯತೆಯಿದೆ.

ಈ ಯೋಜನೆ ಜಾರಿಗೆ ಬಂದರೆ ವಿಶ್ವದಲ್ಲಿಯೇ ಅತಿದೊಡ್ಡ ಆರೋಗ್ಯ ಸೇವೆ ಕಾರ್ಯಕ್ರಮ ಇದಾಗಲಿದ್ದು, ಜಗತ್ತಿನಲ್ಲಿ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ ಆರೋಗ್ಯ ವಲಯದಲ್ಲಿ ಮಹತ್ತರ ಬದಲಾವಣೆಯಾಗಲಿದೆ ಎಂದು ಕೇಂದ್ರ ಆರೋಗ್ಯ ಖಾತೆ ಸಚಿವ ಜೆ ಪಿ ನಡ್ಡಾ ತಿಳಿಸಿದ್ದಾರೆ.


ದೇಶದ ಬಡ, ನಿರ್ಗತಿಕ ಗ್ರಾಮೀಣ ಭಾಗದ ಜನರಿಗೆ ಮತ್ತು ನಗರ ಪ್ರದೇಶಗಳ ಬಡವರ್ಗದ ಜನತೆಗೆ ಸಹಾಯವಾಗುವ ಯೋಜನೆ ಇದಾಗಿದೆ. ಗ್ರಾಮೀಣ ಭಾಗದಲ್ಲಿ 8.3 ಕೋಟಿ ಮತ್ತು ನಗರ ಪ್ರದೇಶಗಳಲ್ಲಿ 2.33 ಕೋಟಿ ಜನತೆಯನ್ನು ಇದು ತಲುಪುವ ಗುರಿ ಹೊಂದಲಾಗಿದೆ.

SCROLL FOR NEXT