ದೇಶ

'ರೈಸಿಂಗ್ ಕಾಶ್ಮೀರ್' ಸಂಪಾದಕ ಬುಖಾರಿ ಹತ್ಯೆ ಪ್ರಕರಣ: ಜೂನ್.20ಕ್ಕೆ ಕಾಶ್ಮೀರ ಬಂದ್'ಗೆ ಪ್ರತ್ಯೇಕತಾವಾದಿಗಳ ಕರೆ

Manjula VN
ಶ್ರೀನಗರ: 'ರೈಸಿಂಗ್ ಕಾಶ್ಮೀರ್' ಪತ್ರಿಕೆ ಸಂಪಾದಕ ಶುಜಾತ್ ಬುಖಾರಿ ಹತ್ಯೆ ಹಾಗೂ ನಾಗರೀಕರ ಹತ್ಯೆ ಪ್ರಕರಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಪ್ರತ್ಯೇಕತಾವಾದಿಗಳು, ಜೂನ್.20 ರಂದು ಕಾಶ್ಮೀರ ಬಂದ್'ಗೆ ಮಂಗಳವಾರ ಕರೆ ನೀಡಿದ್ದಾರೆ. 
ಪ್ರತ್ಯೇಕತಾವಾದಿಗಳ ಜಂಟಿ ಪ್ರತಿಭಟನಾ ನಾಯಕರು ಬಂದ್'ಗೆ ಕರೆ ನೀಡಿದ್ದಾರೆ. ಬಂದ್ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ರಂಜಾನ್ ಹಬ್ಬದ ಬಳಿಕ ನಾಗರೀಕರ ಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ ಎಂದು ಹೇಳಿದೆ. ಅಲ್ಲದೆ, ನಾಗರೀಕರ ಹತ್ಯೆ ಕುರಿತು ಅಂತರಾಷ್ಟ್ರೀಯ ಮಟ್ಟದಲ್ಲಿ ತನಿಖೆಯಾಗಬೇಕೆಂದು ಆಗ್ರಹಿಸಿದೆ. 
ಕಾಶ್ಮೀರದಲ್ಲಿ ನಾಗರೀಕರ ಹತ್ಯೆ ಹೆಚ್ಚಾಗುತ್ತಿದ್ದು, ಜೂನ್.20 ರಂದು ಕಾಶ್ಮೀರದಲ್ಲಿ ಸಂಪೂರ್ಣವಾಗಿ ಬಂದ್ ಆಚರಿಸಲು ನಿರ್ಧರಿಸಲಾಗಿದೆ. ಮೂವರು ಬಾಲಕರನ್ನು ಭಾರತೀಯ ಪಡೆಗಳು ಹತ್ಯೆ ಮಾಡಿದೆ. ಘಟನೆಯಲ್ಲಿ ಗಾಯಗೊಂಡಿರುವ ಮತ್ತೊಬ್ಬ ವ್ಯಕ್ತಿ ಎಸ್'ಕೆಐಎಂಎಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆಂದು ತಿಳಿಸಿದ್ದಾರೆ. 
ಕೇವಲ ನಾಗರೀಕರ ಸಾವಷ್ಟೇ ಅಲ್ಲದೆ, ಪತ್ರಕರ್ತ ಬುಖಾರಿ ಹತ್ಯೆ ವಿರುದ್ಧವೂ ಪ್ರತಿಭಟನೆ ನಡೆಸಲಾಗುತ್ತಿದೆ ಎಂದಿದ್ದಾರೆ, 
ಜೆಆರ್'ಎಲ್ ವಕ್ತಾರರು ಮಾತನಾಡಿ, ರಂಜಾನ್ ಹಬ್ಬದ ಬಳಿಕ ಹಳ್ಳಿ ಹಳ್ಳಿಗಳಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆಗಳನ್ನು ನಡೆಸುತ್ತಿದ್ದು, ಗ್ರಾಮಸ್ಥರನ್ನು ಹಿಗ್ಗಾಮುಗ್ಗಾ ಥಳಿಸುತ್ತಿದ್ದಾರೆ, ನಾಗರೀಕರನ್ನು ಮಾನವ ಗುರಾಣಿಗಳನ್ನಾಗಿ ಮಾಡಿಕೊಂಡು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ. 
SCROLL FOR NEXT