ಕೋಲ್ಕತಾ: ಭವ್ಯ ಭಾರತತದ ಸುಮಾರು 4 ಸಾವಿರ ವರ್ಷಗಳಷ್ಟು ಹಳೆಯದಾದ ಸಂಸ್ಕೃತ ಭಾಷೆಯನ್ನು ಭವಿಷ್ಯದ ಸೂಪರ್ ಕಂಪ್ಯೂಟರ್ ಗಳ ಕೋಡಿಂಗ್ ಗಾಗಿ ಬಳಕೆ ಮಾಡಬಹುದು ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.
ಕೋಲ್ಕತಾದಲ್ಲಿ ನಡೆದ ಕೌಶ್ಯಲ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಜ್ಞಾನಿಗಳು ಸಂಸ್ಕೃತ ಭಾಷೆಯನ್ನು ಸೂಪರ್ ಕಂಪ್ಯೂಟರ್ ಗಳ ಕೋಡಿಂಗ್ ಗಾಗಿ ಬಳಕೆ ಮಾಡುವ ಕುರಿತು ಗಂಭೀರ ಚಿಂತನೆಯಲ್ಲಿ ತೊಡಗಿದ್ದಾರೆ. ಆದರೆ ನಾವು ಇನ್ನೂ ಇಂಗ್ಲೀಷಿನ ಮೇಲೆ ಅವಲಂಭಿತರಾಗಿದ್ದೇವೆ, ನಮ್ಮದೇ ಐತಿಹಾಸಿಕ ಭಾಷೆ ಸಂಸ್ಕೃತದ ಮಹತ್ವ ತಿಳಿದ ವಿದೇಶಿಗರು ಸಂಸ್ಕೃತ ಕಲಿಯುತ್ತಿದ್ದಾರೆ. ಆದರೆ ನಾವು ಮಾತ್ರ ಇಂಗ್ಲೀಷಿಗೆ ಅಂಟಿಕೊಂಡಿದ್ದೇವೆ ಎಂದು ಹೇಳಿದರು.
ಸಂಸ್ಕೃತದ ಮಹತ್ವ ಅರಿತಿರುವ ಹಲವು ದೇಶಗಳು ಈಗಗಾಲೇ ತಮ್ಮ ಪ್ರಜೆಗಳಿಗೆ ಈ ಭಾಷೆಯನ್ನು ಕಲಿಸುತ್ತಿದ್ದು, ಯೂರೋಪಿನ ಹಲವು ದೇಶಗಳ ವಿವಿಯಲ್ಲಿ ಸಂಸ್ಕೃತವನ್ನು ಬೋಧಿಸಲಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಕೂಡ ಕೌಶಸ್ಯ ಅಭಿವೃದ್ಧಿಯ ತನ್ನ ಕಾರ್ಯಕ್ರಮಗಳಲ್ಲಿ ಸಂಸ್ಕೃತ ಬೋಧನೆ ಸೇರಿಸುವ ಕುರಿತು ಗಂಭೀರ ಚಿಂತನೆಯಲ್ಲಿ ತೊಡಗಿದೆ. ಇದಕ್ಕಾಗಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಕಿಲ್ ಎಂಬ ಸಂಸ್ಥೆಯನ್ನು ತೆರಯಲಿದ್ದು, ಇದು ದೇಶದ ಅತ್ಯುನ್ನತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಲಿದೆ. ಕಾನ್ಪುರದಲ್ಲಿ ಐಐಎಸ್ ಸಂಸ್ಥೆಗೆ ಪ್ರಧಾನಿ ಮೋದಿ ಅಡಿಗಲ್ಲು ಹಾಕಲಿದ್ದಾರೆ. ಅಂತೆಯೇ ಪ್ರತೀಯೊಂದು ರಾಜ್ಯದಲ್ಲೂ ಈ ಐಐಎಸ್ ಸಂಸ್ಥೆಯನ್ನು ತೆರಯಾಲಾಗುತ್ತದೆ. ಈ ಸಂಬಂಧ ಪ್ರತೀ ರಾಜ್ಯಕ್ಕೂ ಕೇಂದ್ರ ಸರ್ಕಾರ ನಿರ್ಧಿಷ್ಟ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡಲಿದೆ ಎಂದು ಅನಂತ್ ಕುಮಾರ್ ಹೆಗಡೆ ಮಾಹಿತಿ ನೀಡಿದರು.
ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ನಾವು ಕೆಲಸ ಮಾಡಬೇಕಾಗುತ್ತದೆ. ದೇಶದಲ್ಲಿ ಸುಮಾರು 2 ಕೋಟಿ ಉದ್ಯೋಗದ ಅಗತ್ಯತೆ ಬೀಳಲಿದ್ದು, ಇದಕ್ಕಾಗಿ ನಾವು ಈಗಿನಿಂದಲೇ ಹೊಸ ಆಲೋಚನೆಗಳತ್ತ ಮುನ್ನಡೆಯಬೇಕಿದೆ ಎಂದು ಹೆಗಡೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics