ಶುಜಾತ್ ಬುಖಾರಿಯನ್ನು ಉಲ್ಲೇಖಿಸಿ ಪತ್ರಕರ್ತರಿಗೆ ಎಚ್ಚರಿಕೆ ನೀಡಿದ ಕಾಶ್ಮೀರ ಬಿಜೆಪಿ ನಾಯಕ
ಶ್ರೀನಗರ: ಕಥುವಾ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತೊಂದು ವಿವಾದಲ್ಲಿ ಸಿಲುಕಿದ್ದು, ಜಮ್ಮು-ಕಾಶ್ಮೀರ ಮಾಜಿ ಸಚಿವ ಬಿಜೆಪಿ ನಾಯಕ, ಚೌಧರಿ ಲಾಲ್ ಸಿಂಗ್ ಶುಜಾತ್ ಬುಖಾರಿ ಪ್ರಕರಣವನ್ನು ಉಲ್ಲೇಖಿಸಿ ಪತ್ರಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ.
ಅತ್ಯಾಚಾರ ಪ್ರಕರಣವನ್ನು ವರದಿ ಮಾಡುತ್ತಿರುವ ಮಾಧ್ಯಮಗಳು ತಮ್ಮ ನಡೆಯನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂದು ಬುಖಾರಿ ಪ್ರಕರಣವನ್ನು ಉದಾಹರಣೆಯಾಗಿ ನೀಡಿ ಚೌಧರಿ ಲಾಲ್ ಸಿಂಗ್ ಎಚ್ಚರಿಸಿದ್ದಾರೆ.
ಬಿಜೆಪಿ-ಪಿಡಿಪಿ ಸರ್ಕಾರದಲ್ಲಿ ಅರಣ್ಯ ಖಾತೆ ಸಚಿವರಾಗಿದ್ದ ಸಿಂಗ್ ಅಧಿಕಾರದಲ್ಲಿದ್ದಾಗಲೇ ಕಥುವಾ ಅತ್ಯಾಚಾರ ಪ್ರಕರಣದ ಆರೋಪಿಯ ಪರವಾಗಿ ರ್ಯಾಲಿ ನಡೆಸಿ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೇ ಕಾರಣದಿಂದ ಮಂತ್ರಿ ಪದವಿಯನ್ನೂ ಕಳೆದುಕೊಂಡಿದ್ದರು.
ಕಥುವಾ ಪ್ರಕರಣದಲ್ಲಿ ಪತ್ರಕರ್ತರು ತಪ್ಪಾದ ವಾತಾವರಣವನ್ನು ನಿರ್ಮಿಸಿದ್ದಾರೆ. ನೀವು ಹೇಗೆ ಪತ್ರಿಕೋದ್ಯಮ ಮಾಡಬೇಕು ಹೇಗೆ ಜೀವಿಸಬೇಕು ಎಂಬುದರ ಬಗ್ಗೆ ಸ್ವಯಂ ನಿಯಂತ್ರಣ ವಿಧಿಸಿಕೊಳ್ಳಬೇಕಾಗಿದೆ ಎಂದು ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುತ್ತಿದ್ದ ಪತ್ರಕರ್ತ, ಪ್ರತ್ಯೇಕತಾವಾದಿ ಬಶರತ್ ಹಾಗೂ ಇತ್ತೀಚೆಗಷ್ಟೇ ಗುಂಡೇಟಿಗೆ ಬಲಿಯಾಗಿದ್ದ ಶುಜಾತ್ ಬುಖಾರಿ ಪ್ರಕ್ರಣವನ್ನು ಉಲ್ಲೇಖಿಸಿ ಬಿಜೆಪಿ ನಾಯಕ ಎಚ್ಚರಿಕೆ ನೀಡಿದ್ದಾರೆ.