ದೇಶ

ಲಾಲೂ ಪ್ರಸಾದ್'ಗೆ ತಾತ್ಕಾಲಿಕ ಜಾಮೀನು 6 ವಾರಗಳವರೆಗೆ ವಿಸ್ತರಣೆ

Manjula VN
ರಾಂಚಿ; ಮೇವು ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರ ರಾಜ್ಯದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ ನೀಡಲಾಗಿದ್ದ ತಾತ್ಕಾಲಿಕ ಜಾಮೀನನ್ನು 6 ವಾರಗಳವರೆಗೂ ವಿಸ್ತರಿಸಲಾಗಿದೆ. 
ಲಾಲೂ ಪ್ರಸಾದ್ ಯಾದವ್ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನಲೆಯಲ್ಲಿ ಚಿಕಿತ್ಸೆ ನೀಡುವ ಸಲುವಾಗಿ ಲಾಲೂ ಅವರಿಗೆ ತಾತ್ಕಾಲಿಕ ಜಾಮೀನು ನೀಡಲಾಗಿತ್ತು. ತಾತ್ಕಾಲಿಕ ಜಾಮೀನು ಅವಧಿ ಜೂನ್. 27ಕ್ಕೆ ಅಂತ್ಯವಾಗಲಿತ್ತು. 
ಬಳಿಕ ಲಾಲೂ ಪರ ವಕೀಲರು ಜಾಮೀನು ಅವಧಿ ವಿಸ್ತರಣೆ ಮಾಡುವಂತೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ರಾಂಚಿ ನ್ಯಾಯಾಲಯ, ಜುಲೈ.3ರವರೆಗೂ ತಾತ್ಕಾಲೀಕ ಜಾಮೀನು ಅವಧಿಯನ್ನು ವಿಸ್ತರಣೆ ಮಾಡಿತ್ತು. ಇದೀಗ ಮತ್ತೆ ಆಗಸ್ಟ್.17ರವರೆಗೂ ವಿಸ್ತರಣೆ ಮಾಡಿದೆ. 
3 ತಿಂಗಳುಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ನನ್ನ ಕಕ್ಷಿದಾರನಿಗೆ ಸಲಹೆ ನೀಡಿದ್ದಾರೆ. ಈಗಾಗಲೇ ನ್ಯಾಯಾಲಯ 1 ವಾರಗಳ ಕಾಲ ತಾತ್ಕಾಲಿಕ ಜಾಮೀನು ನೀಡಿದ್ದು, ಇದೀಗ ಮತ್ತೆ 6 ವಾರಗಳ ಕಾಲ ಮತ್ತೆ ಜಾಮೀನನ್ನು ವಿಸ್ತರಣೆ ಮಾಡಿದೆ. ಅಗತ್ಯಬಿದ್ದರೆ, ಜಾಮೀನು ವಿಸ್ತರಣೆ ಕೋರಿ ಮತ್ತೆ ನ್ಯಾಯಾಲಯದಲ್ಲಿ ಮನವಿ ಮಾಡಿಕೊಳ್ಳಲಾಗುತ್ತದೆ ಎಂದು ಲಾಲೂ ಪರ ವಕೀಲರು ತಿಳಿಸಿದ್ದಾರೆ. 
ಬಹುಕೋಟಿ ಮೇವು ಹಗರಣದ ನಾಲ್ಕು ಪ್ರಕರಣಗಳಲ್ಲಿ ಲಾಲೂ ಪ್ರಸಾದ್ ಯಾದವ್ ಅವರು ಶಿಕ್ಷೆಗೊಳಗಾಗಿದ್ದಾರೆ. 
SCROLL FOR NEXT