ದೇಶ

ಮೇಘಾಲಯದಲ್ಲಿ ಎನ್ ಪಿಪಿ- ಬಿಜೆಪಿ ಸರ್ಕಾರ ರಚನೆ, ಮಾ.6ಕ್ಕೆ ಮುಖ್ಯಮಂತ್ರಿಯಾಗಿ ಕೊನ್ರಾಡ್‌ ಸಂಗ್ಮಾ ಪ್ರಮಾಣ

Lingaraj Badiger
ಶಿಲ್ಲಾಂಗ್: ಅತಂತ್ರ ಸ್ಥಿತಿ ನಿರ್ಮಾಣವಾಗಿರುವ ಮೇಘಾಲಯದಲ್ಲಿ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ(ಎನ್‌ಪಿಪಿ) ಬಿಜೆಪಿ ಹಾಗೂ ಇತರೆ ಪಕ್ಷಗಳ ಸಹಕಾರದೊಂದಿಗೆ ಸರ್ಕಾರ ರಚಿಸಲು ಮುಂದಾಗಿದೆ.
ಈ ಸಂಬಂಧ ಎನ್ ಪಿಪಿ ನಾಯಕ ಕೊನ್ರಾಡ್‌ ಸಂಗ್ಮಾ ಅವರು ಇಂದು ಸಂಜೆ ರಾಜ್ಯಪಾಲ ಗಂಗಾ ಪ್ರಸಾದ್‌ ಅವರನ್ನು ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದು, ತಮಗೆ ಎನ್ ಪಿಪಿ, ಬಿಜೆಪಿ,  ಯುನೈಟೆಡ್ ಡೆಮೋಕ್ರಟಿಕ್ ಪಕ್ಷ ಮತ್ತು ಪಲ್ಸ್ ಡೆಮೋಕ್ರಟಿಕ್ಸ್ ಪಕ್ಷದ ಶಾಸಕರು ಸೇರಿದಂತೆ 34 ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ.
ಕೊನ್ರಾಡ್ ಸಂಗ್ಮಾ ಅವರು ಮಾರ್ಚ್‌ 6ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ರಾಜ್ಯಪಾಲರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎನ್‌ಪಿಪಿ ಮುಖಂಡರು, ತಮ್ಮ ಪಕ್ಷದ ಶಾಸಕರು ರಾಜ್ಯದ ಮತ್ತು ಜನತೆಯ ಅಭಿವೃದ್ಧಿಗೆ ಬದ್ಧರಾಗಿದ್ದಾರೆ ಎಂದರು.
ಮೈತ್ರಿಕೂಟ ಸರಕಾರವನ್ನು ಮುನ್ನಡೆಸುವುದು ಸುಲಭವಲ್ಲ. ಆದರೆ ನಮ್ಮ ಜತೆಗಿರುವ ಶಾಸಕರು ರಾಜ್ಯ ಮತ್ತು ಜನತೆಯ ಅಭಿವೃದ್ಧಿಗೆ ಸಂಪೂರ್ಣ ಬದ್ಧರು ಎಂಬ ವಿಶ್ವಾಸ ನನಗಿದೆ. ನಮ್ಮ ಎಲ್ಲ ಕಾರ್ಯಗಳೂ ರಾಜ್ಯದ ಅಭಿವೃದ್ಧಿಗೆ ಕೇಂದ್ರಿತವಾಗಿರುತ್ತವೆ ಎಂದು ಸಂಗ್ಮಾ ತಿಳಿಸಿದ್ದಾರೆ.
ಮೇಘಾಲಯದ ಒಟ್ಟು 59 ಸ್ಥಾನಗಳ ಪೈಕಿ ಕಾಂಗ್ರೆಸ್ ಗೆ ಅತೀ ಹೆಚ್ಚು ಅಂದರೆ 21 ಸ್ಥಾನ, ಎನ್ ಪಿಪಿಗೆ 19 ಸ್ಥಾನ, ಬಿಜೆಪಿ 2 ಹಾಗೂ ಇತರರು 17 ಸ್ಥಾನ ಗಳಿಸಿದ್ದಾರೆ. ಆದರೆ ಮೇಘಾಲಯದಲ್ಲಿ ಸರ್ಕಾರ ರಚನೆಗೆ 31 ಸ್ಥಾನಗಳ ಅಗತ್ಯತೆ ಇದ್ದು, ಯಾವುದೇ ರಾಜಕೀಯ ಪಕ್ಷಕ್ಕೂ ಪೂರ್ಣ ಬಹುಮತ ಇಲ್ಲ
SCROLL FOR NEXT