ದೇಶ

ಮೇಘಾಲಯ ನೂತನ ಸಿಎಂ ಆಗಿ ಕನ್ರಾಡ್ ಸಂಗ್ಮಾ ಪ್ರಮಾಣ ವಚನ ಸ್ವೀಕಾರ

Srinivasamurthy VN
ಶಿಲ್ಲಾಂಗ್: ಮೇಘಾಲಯದ ನೂತನ ಸಿಎಂ ಆಗಿ ಎನ್ ಪಿಪಿ ಪಕ್ಷದ ಕನ್ರಾಡ್ ಸಂಗ್ಮಾ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ.
ರಾಜಧಾನಿ ಶಿಲ್ಲಾಂಗ್ ನಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ಗಂಗಾ ಪ್ರಸಾದ್ ಅವರು ಸಂಗ್ಮಾ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಬೆಳಗ್ಗೆ 10.30ರಲ್ಲಿ ರಾಜಭವನದಲ್ಲಿ ನಡೆದ ಪ್ರತಿಜ್ಞಾವಿಧಿ ಭೋಧನಾ ಕಾರ್ಯಕ್ರಮದಲ್ಲಿ ಸಂಗ್ಮಾ ಅವರೊಂದಿಗೆ ಹಲವು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇನ್ನು ಇತ್ತೀಚೆಗೆ ನಡೆದ ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷವೂ ಪೂರ್ಣ ಬಹುಮತ ಪಡೆದಿರಲಿಲ್ಲ. ಹೀಗಾಗಿ ಅತೀ ಹೆಚ್ಚು ಸ್ಥಾನ ಗಳಿಸಿದ್ದ ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ರಚನೆ ಮಾಡುವಲ್ಲಿ ವಿಫಲವಾಗಿತ್ತು. ಆದರೆ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಬಿಜೆಪಿ, ಎನ್ ಪಿಪಿ ಸೇರಿದಂತೆ ಇತರೆ ನಾಲ್ಕು ಪಕ್ಷಗಳನ್ನು ಒಗ್ಗೂಡಿಸಿಕೊಂಡು ಸರ್ಕಾರ ರಚನೆ ಮಾಡಿದೆ. ಎನ್ ಪಿಪಿಯ ಕನ್ರಾಡ್ ಸಂಗ್ಮಾ ಅವರು ಇದೀಗ ಮೇಘಾಲಯದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇತ್ತೀಚೆಗೆ ಪ್ರಕಟಗೊಂಡ ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 59 ಸ್ಥಾನಗಳ ಪೈಕಿ ಕಾಂಗ್ರೆಸ್ ಗೆ ಅತೀ ಹೆಚ್ಚು ಅಂದರೆ 21 ಸ್ಥಾನ, ಎನ್ ಪಿಪಿಗೆ 19 ಸ್ಥಾನ, ಬಿಜೆಪಿ 2 ಹಾಗೂ ಇತರರು 17 ಸ್ಥಾನ ಗಳಿಸಿದ್ದರು. ಆದರೆ ಮೇಘಾಲಯದಲ್ಲಿ ಸರ್ಕಾರ ರಚನೆಗೆ 31 ಸ್ಥಾನಗಳ ಅಗತ್ಯತೆ ಇದ್ದು, ಯಾವುದೇ ರಾಜಕೀಯ ಪಕ್ಷಕ್ಕೂ ಪೂರ್ಣ ಬಹುಮತ ಇರಲ್ಲ. ಹೀಗಾಗಿ ಸ್ಥಳೀಯ ಪಕ್ಷಗಳು ಹಾಗೂ ಸ್ವತಂತ್ರ್ಯ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಬಿಜೆಪಿ ಮುಂದಾಗಿತ್ತು. ಅದರಲ್ಲಿ ಇದೀಗ ಯಶಸ್ವೀ ಕೂಡ ಆಗಿದೆ.
SCROLL FOR NEXT