ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಕೂಗುವ ಮೊದಲು ಗೌರವಾರ್ಥ 'ಶ್ರೀ' ಪದ ಬಳಕೆ ಮಾಡಿಲ್ಲ ಎಂಬ ಕಾರಣಕ್ಕೆ ಬಿಎಸ್ ಎಫ್ ಸೈನಿಕನೋರ್ವನ ಏಳು ದಿನಗಳ ವೇತನಕ್ಕೆ ಕತ್ತರಿ ಹಾಕಿರುವ ವಿಚಿತ್ರ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಕಳೆದ ಫೆಬ್ರವರಿ 21ರಂದು ಪಶ್ಚಿಮ ಬಂಗಾಳದ ನಾದಿಯಾ ಮಹಾತಪುರದಲ್ಲಿ ಇರುವ ಬೆಟಾಲಿಯನ್ ಕೇಂದ್ರ ಕಚೇರಿಯಲ್ಲಿ ಬಿಎಸ್ ಎಫ್ ಸೈನಿಕರ ದೈನಿಕ ವ್ಯಾಯಾಮದ ಕಾರ್ಯಕ್ರಮ ನಡೆಯುತ್ತಿತ್ತು. ಗಡಿಭದ್ರತಾ ಪಡೆಯ 15ನೇ ಬೆಟಾಲಿಯನ್ ಯೋಧ ಸಂಜೀವ್ ಕುಮಾರ್ ಕಾರ್ಯಕ್ರಮದಲ್ಲಿ ಪರೇಡ್‌ನಲ್ಲಿ ವರದಿ ನೀಡುವ ವೇಳೆ ಪ್ರಧಾನಿ ಮೋದಿ ಹೆಸರು ಉಲ್ಲೇಖ ಮಾಡಿದ್ದರು. ಆದರೆ ಸಂಜೀವ್ ಕುಮಾರ್ ಪ್ರಧಾನಿ ಮೋದಿ ಹೆಸರಿಗೂ ಮೊದಲು ಅವರಿಗೆ ನೀಡಲಾಗುವ ಗೌರವಾರ್ಥ 'ಶ್ರೀ' ಪದದ ಬಳಕೆ ಮಾಡದೆಯೇ ಮೋದಿ ಕಾರ್ಯಕ್ರಮ ಎಂದು ಉಲ್ಲೇಖಿಸಿದ್ದರು.
ಇದು ಸೇನೆಯ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದು. ಯೋಧ ಸಂಜೀವ್ ಕುಮಾರ್ ವಿರುದ್ಧ ಶಿಸ್ತು ಕ್ರಮ ಜರುಗಿಸಿದ್ದಾರೆ. ಈ ಬಗ್ಗೆ ನಡೆದ ವಿಚಾರಣೆಯಲ್ಲಿ ಯೋಧ ಸಂಜೀವ್ ಕುಮಾರ್ ಬಿಎಸ್‌ಎಫ್ ಕಾಯ್ದೆಯ ಸೆಕ್ಷನ್ 40ರ ಅನ್ವಯ ತಪ್ಪಿತಸ್ಥ ಎಂಬ ನಿರ್ಧಾರಕ್ಕೆ ಬಂದಿದ್ದು, ಶಿಕ್ಷೆಯಾಗಿ ಯೋಧನ 7 ದಿನಗಳ ವೇತನವನ್ನು ಕಡಿತಗೊಳಿಸಲಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಗಡಿಭದ್ರತಾ ಪಡೆಯ ಅಧಿಕಾರಿಗಳು ಶ್ರೀ ಪದ ಬಳಕೆ ಮಾಡದೇ ಅವರ ಹೆಸರು ಉಲ್ಲೇಖ ಮಾಡಲಾಗಿದೆ. ಇದು ಪ್ರಧಾನಿ ಮೋದಿಗೆ ತೋರಿದ ಅಗೌರವವಾಗಿದೆ ಎಂದು ಸಮರ್ಥನೆ ನೀಡಿದ್ದಾರೆ.
ಇನ್ನು ಇದೇ ವಿಚಾರವಾಗಿ ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಂಜೀವ್ ಕುಮಾರ್ ಅವರಿಗೆ ನೀಡಿರುವ ಶಿಕ್ಷೆ ಅನಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ಅಲ್ಲದೆ ಇದು ಅತ್ಯಂತ ಕಠಿಣ ಹಾಗೂ ಅನಗತ್ಯ ಶಿಕ್ಷೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics