ದೇಶ

ಬಿಜೆಪಿ ಮೈತ್ರಿಗೆ ತೆಲುಗು ದೇಶಂ ಶೀಘ್ರ ಗುಡ್ ಬೈ?

Srinivasamurthy VN
ನವದೆಹಲಿ: ವಿಭಜಿತ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿಕೆಯಲ್ಲಿ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರ ತೆಲುಗುದೇಶಂ ಪಕ್ಷ ಶೀಘ್ರ ಎನ್ ಡಿಎ ಮೈತ್ರಿಕೂಟದಿಂದ ಹೊರ ಹೋಗಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ನಿನ್ನೆ ವಿಶಾಖಪಟ್ಟಣಂ ನಲ್ಲಿ ನಡೆದ ಪಕ್ಷ ಶಾಸಕರು, ಸಂಸದರು ಮತ್ತು ಮುಖಂಡರುಗಳ ಜೊತೆ ನಡೆದ ಸಭೆಯಲ್ಲಿ ಸಿಎಂ ಚಂದ್ರಬಾಬು ನಾಯ್ಡು ಅವರು ಈ ತೀರ್ಮಾನ ಕೈಗೊಂಡಿದ್ದು, ಶೀಘ್ರ ಎನ್ ಡಿಎ ಮೈತ್ರಿಕೂಟದ ಕುರಿತು ಒಂದು ನಿರ್ಧಾರ ತಳೆಯುವುದಾಗಿ ಹೇಳಿದ್ದಾರೆ. 
ಈ ಹಿಂದೆ ಕೇಂದ್ರ ವಿತ್ತ ಸಚಿವಾಲಯದ ಅಧಿಕಾರಿಗಳು ಮತ್ತು ಅರುಣ್ ಜೇಟ್ಲಿ ಅವರೊಂದಿಗಿನ ಸರಣಿ ಭೇಟಿ, ಮನವಿ ಸಲ್ಲಿಕೆಗಳ ಬಳಿಕವೂ ಕೇಂದ್ರ ಸರ್ಕಾರ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿಲ್ಲ. ಪ್ರಮುಖವಾಗಿ ವಿಭಜಿತ ಆಂಧ್ರ ಪ್ರದೇಶ ಸಂಕಷ್ಟದಲ್ಲಿದ್ದು, ಕೈಗಾರಿಕಾ ಪ್ರೋತ್ಸಾಹ ಭತ್ಯೆ ನೀಡುವಂತೆ ಕೇಂದ್ರಸರ್ಕಾರವನ್ನು ಟಿಡಿಪಿ ಮನವಿ ಮಾಡಿಕೊಂಡಿತ್ತು. ಆದರೆ ಇದಕ್ಕೆ ನಿರಾಕರಿಸಿದ್ದ ಕೇಂದ್ರ ಸರ್ಕಾರ, ಆರ್ಥಿಕ ವಿಶೇಷ ಪ್ಯಾಕೇಜ್ ಘೋಷಣೆ ಮಾತ್ರ ಮಾಡಿತ್ತು.
ಇದರಿಂದ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದ ಟಿಡಿಪಿ, ಸಂಸತ್ ಕಲಾಪದಲ್ಲೂ ತನ್ನ ಪ್ರತಿಭಟನೆ ಮುಂದುವರೆಸಿದ್ದು, ಇದೀಗ ಬಿಜೆಪಿ ಮೈತ್ರಿಯನ್ನೇ ಕಡಿದುಕೊಳ್ಳಲು ಮುಂದಾಗಿದೆ.
ಮೂಲಗಳ ಪ್ರಕಾರ ಟಿಡಿಪಿ ಮುಖ್ಯಸ್ಥ ಹಾಗೂ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರು ಇನ್ನು ಎರಡು ದಿನಗಳಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದ್ದು, ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವ ಸಂಸದರೂ ಕೂಡ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಕುರಿತು ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.
SCROLL FOR NEXT