ಮುಂಬೈ: ಭಾರತದ ಪುರಾತತ್ವ ಸಮೀಕ್ಷೆ (ಎಎಸ್ಐ) ಸಂರಕ್ಷಿಸುತ್ತಿರುವ 11ನೇ ಶತಮಾನದ ಶ್ರೀ ಲಿಂಗರಾಜ್ ದೇಗುಲದಲ್ಲಿ ಚಿತ್ರೀಕರಣ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ರವೀನಾ ಟಂಡನ್ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಭುವನೇಶ್ವರ ಪೊಲೀಸರು ಗುರುವಾರ ಹೇಳಿದ್ದಾರೆ.
ದೇವಾಲಯದ ಆವರಣದೊಳಗೆ ಟಂಡನ್ ಖಾಸಗಿ ಜಾಹಿರಾತು ಹಿನ್ನೆಲೆ ಸೌಂದರ್ಯ ಸಲಹೆಗಳನ್ನು ನೀಡುತ್ತಿರುವ ವಿಡಿಯೋವೊಂದನ್ನು ವ್ಯಕ್ತಿಯೋರ್ವ ಸೆರೆಹಿಡಿದಿದ್ದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದ. ಈ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ರವೀನಾ ಟಂಡನ್ ವಿರುದ್ಧ ದೇಗುಲದ ಆಡಳಿತ ಮಂಡಳಿ ಪ್ರಕರಣ ದಾಖಲಿಸಿತ್ತು.
ಪ್ರಕರಣ ಸಂಬಂಧ ಇದೀಗ ಹೇಳಿಕೆ ನೀಡಿರುವ ಭುವನೇಶ್ವರದ ಪೊಲೀಸ್ ಆಯುಕ್ತ ಯೋಗೇಶ್ ಬಹದ್ದೂರ್ ಖುರಾನಿಯಾ ಅವರು, ವಿಡಿಯೋ ಕುರಿತಂತೆ ರವೀನಾ ಟಂಡನ್ ವಿರುದ್ಧ ಕ್ರಮ ಕೈಗೊಳ್ಳಲು ಯಾವುದೇ ಕಾನೂನುಗಳಿಲ್ಲ. ಶಿವರಾತ್ರಿ ಸಂದರ್ಭದಲ್ಲಿ ಲಿಂಗರಾಜ ದೇಗುಲಕ್ಕೆ ಹಲವಾರು ಭಕ್ತಾದಿಗಳು ಬರುತ್ತಾರೆ. ಈ ವೇಳೆ ಹಲವರು ಫೋಟೋಗಳು ಹಾಗೂ ವಿಡಿಯೋಗಳನ್ನು ಬಹಿರಂಗವಾಗಿಯೇ ಮಾಡುತ್ತಿರುತ್ತಾರೆ. ಹಲವು ಸುದ್ದಿ ವಾಹಿನಿಗಳೂ ಕೂಡ ಇದನ್ನು ನೇರ ಪ್ರಸಾರ ಮಾಡುತ್ತಿರುತ್ತವೆ. ಈ ಪ್ರಕರಣದಲ್ಲಿ ದೇಗುಲದ ಆಡಳಿತ ಮಂಡಳಿ ದೂರು ನೀಡಿದೆ. ಯಾವುದೇ ಕಾನೂನುಗಳಿಲ್ಲದಿರುವುದರಿಂದ ನಟಿ ರವೀನಾ ಟಂಡನ್ ಅಥವಾ ಇನ್ನಾವುದೇ ವ್ಯಕ್ತಿಯ ವಿರುದ್ಧ ನಾವು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.