ದೇಶ

ಪಿಎನ್ ಬಿ ವಂಚನೆ: ನೀರವ್ ಮೋದಿ, ಮೆಹುಲ್ ಚೋಕ್ಸಿಗೆ ಸಿಬಿಐ ಮತ್ತೆ ಸಮನ್ಸ್

Lingaraj Badiger
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 12,700 ಕೋಟಿ ರು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಜ್ರದ ವ್ಯಾಪಾರಿ ನೀರವ್‌ ಮೋದಿ ಮತ್ತು ಅವರ ಅಂಕಲ್,  ಗೀತಾಂಜಲಿ ಜೆಮ್ಸ್ ನ ಮೆಹುಲ್ ಚೋಕ್ಸಿ ವಿರುದ್ಧ ಸಿಬಿಐ ಗುರುವಾರ ಮತ್ತೆ ಸಮನ್ಸ್ ಜಾರಿ ಮಾಡಿದೆ.
ವಿಚಾರಣೆಗೆ ಹಾಜರಾಗುವಂತೆ ಮತ್ತು ತನಿಖೆಗೆ ಸಹಕರಿಸುವಂತೆ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ ಸಿಬಿಐ ಸಮನ್ಸ್ ಜಾರಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ ಫೆಬ್ರವರಿ 19, 23 ಮತ್ತು 28ರಂದು ಮೂರು ಬಾರಿ ಆದಷ್ಟು ಬೇಗ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸಮನ್ಸ್ ಜಾರಿ ಮಾಡಿತ್ತು. ಆದರೆ ಆರೋಪಿಗಳಿಂದ ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ಈಗ ಮತ್ತೊಂದು ಸಮನ್ಸ್ ಜಾರಿ ಮಾಡಿದ್ದು, ಮಾರ್ಚ್ 7ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಈ ಮಧ್ಯೆ, ತನ್ನ ಪಾಸ್ ಪೋರ್ಟ್ ಅಮಾನತುಗೊಳಿಸಿರುವುದರಿಂದ ಮತ್ತು ಅನಾರೋಗ್ಯದಿಂದ ಭಾರತಕ್ಕೆ ಬಂದು ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಮೆಹುಲ್ ಚೋಕ್ಸಿ ತನ್ನ ವಕೀಲರ ಮೂಲಕ ತಿಳಿಸಿದ್ದಾರೆ. ಅಲ್ಲದೆ ಈ ಸಂಬಂಧ ಸಿಬಿಐಗೆ ಚೋಕ್ಸಿ ಮೇಲ್ ಮಾಡಿದ್ದು, ಪಾಸ್ ಪೋರ್ಟ್ ಅಮಾನತು ಮತ್ತು ಅನಾರೋಗ್ಯದ ಕಾರಣ ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
SCROLL FOR NEXT