ಹಿರಿಯ ವಕೀಲರಾದ ಮಜೀದ್ ಮೆಮನ್ ಹಾಗೂ ಉಜ್ವಲ್ ನಿಕ್ಕಮ್
ನವದೆಹಲಿ: ಸರಣಿ ಸ್ಫೋಟದ ರೂವಾರಿ ಫಾರೂಕ್ ಟಕ್ಲಾ ಬಂಧನ ದಾವೂದ್ ಇಬ್ರಾಹಿಂ ಗ್ಯಾಂಗ್ ನೀಡಿದ ಮರ್ಮಾಘಾತ ಎಂದು ಖ್ಯಾತ ಹಿರಿಯ ವಕೀಲ ಉಜ್ವಲ್ ನಿಕ್ಕಮ್ ಅವರು ಹೇಳಿದ್ದಾರೆ.
ಗುರುವಾರ ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನ ಬಲಗೈ ಭಂಟ ಫರೂಕ್ ಟಕ್ಲಾ ನನ್ನು ಸಿಬಿಐ ಅಧಿಕಾರಿಗಳು ಬಂಧಿಸಿ ಮುಂಬೈಗೆ ಕರೆತಂದ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದತೆಯೇ ಪ್ರತಿಕ್ರಿಯೆ ನೀಡಿರುವ ಹಿರಿಯ ವಕೀಲ ಉಜ್ವಲ್ ನಿಕ್ಕಮ್ ಅವರು, ದಾವೂದ್ ಇಬ್ರಾಹಿಂ ವಿಚಾರದಲ್ಲಿ ಭಾರತಕ್ಕೆ ಸಿಕ್ಕ ದೊಡ್ಡ ಗೆಲುವು ಇದು, ಅಂತೆಯೇ ದಾವೂದ್ ಗ್ಯಾಂಗ್ ಗೆ ಭಾರತ ನೀಡಿದ ದೊಡ್ಡ ಮರ್ಮಾಘಾತ ಇದಾಗಿದೆ. ಡಿ-ಗ್ಯಾಂಗ್ ನ ಮೊದಲ ಹಂತದ ಪಾತಕಿಗಳಲ್ಲಿ ಗುರುತಿಸಿಕೊಂಡ್ಡ ಟಕ್ಲಾ ಬಂಧನದಿಂದಾಗಿ ದಾವೂದ್ ಗ್ಯಾಂಗ್ ತೀವ್ರ ಹಿನ್ನಡೆಯಾಗಿದೆ ಎಂದು ಉಜ್ವಲ್ ನಿಕ್ಕಮ್ ಹೇಳಿದ್ದಾರೆ.
1993ರ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಟಕ್ಲಾ ಭಾರತಕ್ಕೆ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿ ಬೇಕಿದ್ದ, ಈತನ ಬಂಧವಕ್ಕಾಗಿ 1995ರಲ್ಲಿ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು. ಇದೀಗ ಟಕ್ಲಾ ಬಂಧನವಾಗಿದ್ದು, ಆತನ ಮೂಲಕ ದಾವೂದ್ ಗ್ಯಾಂಗ್ ಅನ್ನು ಕೂಡ ಟ್ರೇಸ್ ಮಾಡಬಹುದು ಎಂದು ಉಜ್ವಲ್ ನಿಕ್ಕಮ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮತ್ತೋರ್ವ ಹಿರಿಯ ವಕೀಲ ಹಾಗೂ ಎನ್ ಸಿಪಿ ಮುಖಂಡ ಮಜೀದ್ ಮೆಮನ್ ಅವರು, ದುಬೈನಿಂದ ಗಡಿಪಾರಾದ ಹಿನ್ನಲೆಯಲ್ಲಿ ಆತ ಭಾರತಕ್ಕೆ ವಾಪಸ್ ಆಗಿದ್ದು, ಈ ಹೊತ್ತಿನಲ್ಲಿ ಸಿಬಿಐ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ. ಆತನ ಮೇಲೆ ಟಾಡಾ ಪ್ರಕರಣದಡಿಯಲ್ಲಿ ಗಂಭೀರ ಪ್ರಕರಣ ದಾಖಲಾಗಿದ್ದು, ಆತನಿಗೆ ಜಾಮೀನು ದೊರೆಯುವ ಸಾಧ್ಯತೆಯೇ ಇಲ್ಲ. ನ್ಯಾಯಾಲಯದ ಮುಂದಿನ ಆದೇಶದ ವರೆಗೂ ಆತ ಜೈಲಿನಲ್ಲೇ ಇರಬೇಕು ಎಂದು ಹೇಳಿದ್ದಾರೆ.