ದೇಶ

ಮತ್ತೆ 36 ರಾಫೆಲ್ ಜೆಟ್‌ ಪೂರೈಸಲು ಫ್ರಾನ್ಸ್‌ ಉತ್ಸುಕ: ಸದ್ಯಕ್ಕಿಲ್ಲ ಭಾರತದ ನಿರ್ಧಾರ

Srinivasamurthy VN
ನವದೆಹಲಿ: ಹಾಲಿ ಇರುವ ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದೊಂದಿಗೆಯೇ ಮತ್ತೆ 36 ರಾಫೆಲ್ ಜೆಟ್ ವಿಮಾನ ಪೂರೈಕೆ ಮಾಡಲು ಫ್ರಾನ್ಸ್ ದೇಶ ಉತ್ಸುಕವಾಗಿದೆ.
ಭಾರತ ಪ್ರವಾಸದಲ್ಲಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರನ್ ಮತ್ತು ಅವರ ತಂಡ ಭಾರತದೊಂದಿಗೆ ಈ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದ್ದು, ಇದಕ್ಕೂ ಮೊದಲೇ ಫ್ರಾನ್ಸ್ ರಕ್ಷಣಾ ಕಾರ್ಯದರ್ಶಿ  ಫ್ಲಾರೆನ್ಸ್‌ ಪಾರ್ಲೆ ಅವರು ಕೇಂದ್ರ ರಕ್ಷಣಾ ಸಚಿವೆ  ನಿರ್ಮಲಾ ಸೀತಾರಾಮನ್ ಅವರೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಇಂದು ನಡೆದ ಫ್ರಾನ್ಸ್ ಮತ್ತು ಭಾರತ ಮುಖಂಡರ ಜಂಟಿ ಹೇಳಿಕೆಯಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪವಾಗಿಲ್ಲವಾದರೂ ಫ್ರಾನ್ಸ್ ಅಧಿಕಾರಿಗಳು ಮಾತ್ರ ಭಾರತದೊಂದಿಗೆ ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಆದರೆ ಭಾರತ ಮಾತ್ರ ಇದಕ್ಕೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಂದಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ರಕ್ಷಣಾ ಸಚಿವಾಲಯ, "ಭವಿಷ್ಯದಲ್ಲಿ ಎರಡು ಹೆಚ್ಚುವರಿ ಸ್ಕ್ವಾಡ್ರನ್‌ಗಳ (1 ಸ್ಕ್ವಾಡ್ರನ್= 18 ಜೆಟ್‌ ವಿಮಾನಗಳು) ಸೇರ್ಪಡೆ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮೊದಲ ಹಂತದ 36 ವಿಮಾನಗಳ ಪೂರೈಕೆ ಪೂರ್ಣಗೊಂಡ ಬಳಿಕವಷ್ಟೇ ಮುಂದಿನ ನಿರ್ಧಾರ" ಎಂದು ತಿಳಿಸಿದೆ.
ಇನ್ನು 2016ರ ಸೆಪ್ಟೆಂಬರ್‌ನಲ್ಲಿ ಸಹಿ ಹಾಕಲಾದ ಒಪ್ಪಂದದಂತೆ ಭಾರತೀಯ ವಾಯುಪಡೆ ಈಗಾಗಲೇ 59,000 ಕೋಟಿ ರೂ.ಗಳ ವೆಚ್ಚದಲ್ಲಿ 36 ರಾಫೆಲ್‌ ಯುದ್ಧ ವಿಮಾನಗಳ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಿದೆ. ಮೊದಲ ಹಂತದ 36 ರಾಫೆಲ್ ಜೆಟ್‌ಗಳನ್ನು 2019ರ ನವೆಂಬರ್‌ನಿಂದ 2022ರ ಮಧ್ಯಭಾಗದೊಳಗೆ ಪಶ್ಚಿಮ ಬಂಗಾಳದ ಹಾಸಿಮಾರ ಮತ್ತು ಹರ್ಯಾಣದ ಅಂಬಾಲಾ ವಾಯುನೆಲೆಗಳಲ್ಲಿ ನಿಯೋಜನೆಗೊಳ್ಳಲಿವೆ.
SCROLL FOR NEXT