ಭೋಪಾಲ್; 120 ದಿನಗಳಲ್ಲಿ ಬರೋಬ್ಬರಿ 62 ಸಾಮೂಹಿಕ ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಮಧ್ಯಪ್ರದೇಶ ರಾಜ್ಯ ಇದೀಗ ಅತ್ಯಾಚಾರಿಗಳ ನಾಡಾಗಿ ನಿರ್ಮಾಣವಾಗಿದೆ.
2017ನೇ ವರ್ಷದ ನಾಲ್ಕು ತಿಂಗಳಲ್ಲಿ ಅಂದರೆ 120 ದಿನಗಳಲ್ಲಿ 62 ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. 43 ಮಹಿಳೆಯರನ್ನು ಹತ್ಯೆ ಮಾಡಲಾಗಿದ್ದು, 10 ಮಹಿಳೆಯರನ್ನು ಸಜೀವವಾಗಿ ದಹಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಮಹಿಳೆಯರ ಮೇಲಿನ ಅತ್ಯಾಚಾರ, ಹತ್ಯೆ ಪ್ರಕರಣಗಳ ಅಂಕಿ ಅಂಶಗಳ ಕುರಿತು ಚರ್ಚೆಗಳು ನಡೆದಿದೆ.
ಮಧ್ಯಪ್ರದೇಶ ಮಹಿಳೆಯರಿಗೆ ಸುರಕ್ಷಿತವಲ್ಲದ ರಾಜ್ಯವಾಗಿ ನಿರ್ಮಾಣಗೊಂಡಿರುವ ಹಿನ್ನಲೆಯಲ್ಲಿ ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಇಲ್ಲಿನ ಸರ್ಕಾರ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿ, ಆರೋಪ ಸಾಬೀತಾದರೆ ವ್ಯಕ್ತಿಗೆ 12 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸುವ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಕಾಯ್ದೆ ಜಾರಿಗೊಂಡರೂ ರಾಜ್ಯದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಮುಂದುವರೆದಿದೆ.
2017ನೇ ಸಾಲಿನ ನವೆಂಬರ್ ನಿಂದ ಪ್ರಸಕ್ತ ಸಾಲಿನ ಫೆಬ್ರವರಿ 15ರವಗೆಗೂ 33 ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರಗಳು ನಡೆದಿದೆ. ರತ್ಲಾಮ್, ಧಾರ್ ಮತ್ತು ಹರ್ದಾ ಜಿಲ್ಲೆಗಳಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾಗಿರುವುದಾಗಿ ವರದಿಗಳು ತಿಳಿಸಿವೆ.
ಖರ್ಗೊನ್ ಜಿಲ್ಲೆಯಲ್ಲಿ ಐವರು ಮಹಿಳೆಯರನ್ನು ಹತ್ಯೆ ಮಾಡಲಾಗಿದೆ. ಬೆತುಲ್ ಮತ್ತು ರೈಸೆನ್ ಜಿಲ್ಲೆಗಳಲ್ಲಿ ನಾಲ್ವರು ಮಹಿಳೆಯರು ಹತ್ಯೆಯಾಗಿರುವ ಪ್ರಕರಣಗಳು ದಾಖಲಾಗಿವೆ.ಹೊಶಾಂಗಬಾದ್ ಜಿಲ್ಲೆಯಲ್ಲಿ ಐವರು ಮಹಿಳೆಯರೂ ಸೇರಿದಂತೆ ಒಟ್ಟು 10 ಮಹಿಳೆಯರನ್ನು ಸಜೀವವಾಗಿ ದಹಿಸಲಾಗಿದೆ.
ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳನ್ನು ಪರಿಶೀಲಿಸಲು ರಾಜ್ಯ ಸರ್ಕಾರ ಹಲವು ಪ್ರಯತ್ನಗಳನ್ನು ಮಾಡಿದ್ದು, ಈ ಯತ್ನಗಳು ಕಾಗದದ ಮೇಲೆ ಹೆಚ್ಚು ಶಕ್ತಿಯುತವಾಗಿವೆಯೇ ಹೊರತು ನೇರವಾಗಿ ಯಾವುದೇ ರೀತಿಯ ಪರಿಣಾಮಕಾರಿಯಾಗಿಲ್ಲ ಎಂದು ಕಾಂಗ್ರೆಸ್ ವಕ್ತಾರ ಕೆ.ಕೆ. ಮಿಶ್ರಾ ಅವರು ಹೇಳಿದ್ದಾರೆ.
ಅಧಿವೇಶನದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಸಮರ್ಥಿಸಿಕೊಂಡಿರುವ ಅಧಿಕಾರಿಗಳು, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಪ್ರಮುಖವಾಗಿ ಅಪ್ರಾಪ್ತ ಬಾಲಕಿಯರ ಪ್ರಕರಣಗಳಲ್ಲಿ ಸರ್ಕಾರ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಕಠಿಣ ಕ್ರಮಕೈಗೊಳ್ಳುವಂತೆ ರಾಜ್ಯದ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಇಂತಹ ಪ್ರಕರಣಗಳ ತನಿಖೆಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಿ, ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಲು ತಿಳಿಸಲಾಗಿದೆ ಎಂದು ಮಧ್ಯಪ್ರದೇಶ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮುಖ್ಯಸ್ಥ ರಾಘವೇಂದ್ರ ಶರ್ಮಾ ಅವರು ಹೇಳಿದ್ದಾರೆ.
2016ನೇ ಸಾಲಿನಲ್ಲಿ ದೇಶದಲ್ಲಿ ಒಟ್ಟು 38,947 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಮಧ್ಯಪ್ರದೇಶ ರಾಜ್ಯದಲ್ಲಿ 4,882 ಪ್ರಕರಣಗಳು ದಾಖಲಾಗಿವೆ. ಉತ್ತರಪ್ರದೇಶದಲ್ಲಿ 4,816, ಮಹಾರಾಷ್ಟ್ರದಲ್ಲಿ 4,189 ಪ್ರಕರಣಗಳು ದಾಖಲಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲು ಸಂಸ್ಥೆ ಮಾಹಿತಿ ನೀಡಿದೆ.
ಬಾಲಕಿಯರು ಹಾಗೂ ಮಹಿಳೆಯರಿಗೆ ಸೂಕ್ತ ರೀತಿಯ ಭದ್ರತೆ ಒದಗಿಸುವ ಅಗತ್ಯವಿದೆ. ರಾಜ್ಯದ ಅಧಿಕಾರಿಗಳು ಹಾಗೂ ಬಾಬಾಗಳಿಗೆ ಹೆಚ್ಚಿನ ಭದ್ರತೆಗಳನ್ನು ನೀಡುತ್ತಿರುವಾಗ ರಾಜ್ಯ ಪೊಲೀಸ್ ಇಲಾಖೆ ಮಹಿಳೆಯರಿಗೆ ಹೇಗೆ ಭದ್ರತೆ ನೀಡಲು ಸಾಧ್ಯವಾಗುತ್ತದೆ? ರಾಜ್ಯದಲ್ಲಿ ಸಾಕಷ್ಟು ಸಿಸಿಟಿವಿ ಕ್ಯಾಮೆರಾಗಳು ಹಾಗೂ ಇನ್ನಿತರೆ ಭದ್ರತಾ ವಸ್ತುಗಳಿವೆ ಎಂದು ಹೇಳಲಾಗುತ್ತಿದೆ. ಆದರೆ, ಆ ವಸ್ತುಗಳನ್ನು ಎಷ್ಟರ ಮಟ್ಟಿದೆ ಕೆಲಸ ಮಾಡುತ್ತಿದೆ? ಪೊಲೀಸರು ಇದರಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ. ಪುರುಷರು ಹಾಗೂ ಕುಟುಂಬಗಳಲ್ಲಿರುವ ಮನಸ್ಥಿತಿಗಳು ಬದಲಾಗಬೇಕಿದೆ ಎಂದು ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಉಪಾಸನಾ ಬೆಹರ್ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics