ದೇಶ

ಒಲಾ, ಉಬರ್ ಕ್ಯಾಬ್ ಚಾಲಕರ ಅನಿರ್ದಿಷ್ಟಾವಧಿ ಮುಷ್ಕರ ಆರಂಭ : ಸೇವೆಯಲ್ಲಿ ವ್ಯತ್ಯಯ

Sumana Upadhyaya

ಹೈದರಾಬಾದ್: ತಮ್ಮ ಆರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉಬರ್ ಮತ್ತು ಒಲಾ ಕ್ಯಾಬ್ ಚಾಲಕರ ರಾಷ್ಟ್ರಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಕಳೆದ ಮಧ್ಯರಾತ್ರಿಯಿಂದ ಆರಂಭವಾಗಿದೆ.

ಹೈದರಾಬಾದಿನ ಒಲಾ ಮತ್ತು ಉಬರ್ ಕ್ಯಾಬ್ ಚಾಲಕರಿಗೆ ಮುಷ್ಕರದಲ್ಲಿ ಬೆಂಗಳೂರು, ಮುಂಬೈ, ದೆಹಲಿ ಮತ್ತು ಪುಣೆಯ ಚಾಲಕರು ಸಹ ಕೈಜೋಡಿಸಿದ್ದಾರೆ. ಇದರಿಂದ ಒಲಾ ಮತ್ತು ಉಬರ್ ಕ್ಯಾಬ್ ಸೇವೆಯಲ್ಲಿ ವ್ಯತ್ಯಯವುಂಟಾಗಲಿದೆ. ಅಲ್ಲದೆ ತಮ್ಮ ದಿನನಿತ್ಯದ ಜೀವನಕ್ಕೆ ಕ್ಯಾಬ್ ಚಾಲನೆಯ ಸಂಪಾದನೆಯನ್ನೇ ನಂಬಿಕೊಂಡಿರುವ ಚಾಲಕರ ಮೇಲೆ ಸಹ ಪರಿಣಾಮ ಬೀರಲಿದೆ.

ಕ್ಯಾಬ್ ಚಾಲಕರು ಮುಷ್ಕರ ನಡೆಸುತ್ತಿರುವುದು ಇದು ಮೊದಲ ಬಾರಿಯೇನಲ್ಲ. ಆದರೆ ಈ ಬಾರಿ ಮಾತ್ರ ಇದು ದೇಶಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ. ಕಳೆದ ವರ್ಷ ಆರಂಭದಲ್ಲಿ ಕೂಡ ಚಾಲಕರು ಮುಷ್ಕರ ನಡೆಸಿದ್ದರು, ಕೊನೆಗೆ ಸಾಲದಿಂದ ಕೆಲವು ಚಾಲಕರು ಆತ್ಮಹತ್ಯೆ ಮಾಡಿಕೊಂಡಿದ್ದರು ಕೂಡ. ಕ್ಯಾಬ್ ಸಂಗ್ರಾಹಕರು ಮಾತ್ರ ಈ ಮುಷ್ಕರದ ಜೊತೆ ಕೈಜೋಡಿಸುವುದಿಲ್ಲ. ಅವರು ಚಾಲಕರನ್ನು ಪಾಲುದಾರರೆಂದು ಒಪ್ಪಿಕೊಳ್ಳುವುದಿಲ್ಲ ಮತ್ತು ಗುತ್ತಿಗೆ ಆಧಾರದ ಮೇಲೆ ನೌಕರಿಗೆ ತೆಗೆದುಕೊಳ್ಳುತ್ತಾರೆ ಎಂಬುದು ಚಾಲಕರ ಅಳಲಾಗಿದೆ.

ಈ ಮುಷ್ಕರದ ಬಗ್ಗೆ ಒಲಾ ಮತ್ತು ಉಬರ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಉಪ್ಪಳದ ಮಹೇಶ್ ಎಂಬ ಒಲಾ ಕ್ಯಾಬ್ ಚಾಲಕ ವಾಹನದ ಇಎಂಐ ಕಟ್ಟಲಾರದೆ ಸಾಲದಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ಇನ್ನು ಮುಂದೆ ಪ್ರತಿಭಟನೆ ಮಾಡದಂತೆ ಬೇರೆ ರಾಜ್ಯಗಳ ಕ್ಯಾಬ್ ಚಾಲಕರೊಂದಿಗೆ ಸೇರಿ ಸಂಘಟನೆ ನಡೆಸಲು ತೀರ್ಮಾನಿಸಲಾಗಿತ್ತು.

SCROLL FOR NEXT