ನವದೆಹಲಿ: 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವಹಿವಾಟು ಪ್ರಕರಣದಲ್ಲಿ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಹಾಗೂ ಡಿಎಂಕೆ ರಾಜ್ಯಸಭಾ ಸದಸ್ಯೆ ಕನಿಮೋಳಿ ಮತ್ತು ಇತರರನ್ನು ವಿಶೇಷ ಕೋರ್ಟ್ ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ(ಇಡಿ) ಸೋಮವಾರ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದೆ.
ಕಳೆದ ವರ್ಷ ಡಿಸೆಂಬರ್ 21ರಂದು ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಬಹುಕೋಟಿ 2 ಜಿ ಸ್ಪೆಕ್ಟ್ರಂ ಹಗರಣದ ತೀರ್ಪು ಪ್ರಕಟಿಸಿದ್ದ ಸಿಬಿಐ ವಿಶೇಷ ನ್ಯಾಯಾಲಯ, ಪ್ರಕರಣದ ಪ್ರಮುಖ ಆರೋಪಿಗಳಾದ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಹಾಗೂ ಡಿಎಂಕೆ ರಾಜ್ಯಸಭಾ ಸದಸ್ಯೆ ಕನಿಮೋಳಿ ಸೇರಿದಂತೆ ಎಲ್ಲಾ 17 ಆರೋಪಿಗಳನ್ನು ಆರೋಪಮುಕ್ತಗೊಳಿಸಿತ್ತು.
ಡಿಎಂಕೆ ಮಾಲೀಕತ್ವದ ಕಲೈನಾರ್ ಟಿವಿಗೆ ಸ್ವಾನ್ ಟೆಲೆಕಾಮ್ ಲಿಮಿಟೆಡ್ 200 ಕೋಟಿ ರುಪಾಯಿ ನೀಡಿದೆ ಎಂದು ಇಡಿ ತನ್ನ ಚಾರ್ಜ್ ಶೀಟ್ ನಲ್ಲಿ ಆರೋಪಿಸಿದೆ.
2007-08ನೇ ಸಾಲಿನಲ್ಲಿ 2 ಜಿ ತರಂಗಾಂತರ ಹಂಚಿಕೆ ಸಂದರ್ಭದಲ್ಲಿ ಈ ಹಗರಣ ನಡೆದಿತ್ತು. ಇದರಿಂದಾಗಿ ಕೇಂದ್ರ ಸರ್ಕಾರಕ್ಕೆ 1 ಲಕ್ಷದ 76 ಸಾವಿರ ಕೋಟಿ ನಷ್ಟವುಂಟಾಗಿತ್ತು ಎಂದು ಸಿಎಜಿ ತಮ್ಮ ವರದಿಯಲ್ಲಿ ತಿಳಿಸಿದ್ದರು. ಇದರ ಜಾಡು ಹಿಡಿದು ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು 2011ರಲ್ಲಿ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಹಾಗೂ ಕನಿಮೊಳಿ ಸೇರಿದಂತೆ 19 ಮಂದಿ ವಿರುದ್ಧ ಕೇಸ್ ದಾಖಲಿಸಿದ್ದರು. ಆದರೆ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಕೋರ್ಟ್ ಆರೋಪಿಗಳನ್ನು ಖುಲಾಸೆಗೊಳಿಸಿದೆ.