ಸಂಸತ್ತಿನ ಎದುರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಟಿಡಿಪಿ ಪಕ್ಷದ ನಾಯಕರು
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್'ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಉಭಯ ಸದನಗಳಲ್ಲಿ ತೀವ್ರ ಗದ್ದಲ ಉಂಟಾಗಿದ್ದು, ಈ ಹಿನ್ನಲೆಯಲ್ಲಿ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ.
ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ಮೋದಿ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ನೀಡಬೇಕೆಂದು ಟಿಡಿಪಿ ಹಾಗೂ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕರು ಪಟ್ಟು ಹಿಡಿದು ಕುಳಿತಿದ್ದರು. ಅಲ್ಲದೆ, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಆರಂಭಿಸಿದರು. ನಮಗೆ ನ್ಯಾಯ ಬೇಕೆಂದು ಘೋಷಣೆ ಕೂಗಲು ಆರಂಭಿಸಿದರು. ಬಳಿಕ ಮಧ್ಯೆ ಪ್ರವೇಶಿಸಿದ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ನಾಯಕರನ್ನು ಸಮಾಧಾನ ಪಡಿಸಿ ತಮ್ಮ ತಮ್ಮ ಸ್ಥಾನಗಳಲ್ಲಿ ಕುಳಿತುಕೊಳ್ಳುವಂತೆ ಮನವಿ ಮಾಡಿಕೊಂಡರು. ಆದರೂ, ಸಮಾಧಾನ ಗೊಳ್ಳದ ಸಂಸದರು ಮತ್ತಷ್ಟು ಗದ್ದಲವನ್ನುಂಟು ಮಾಡಲು ಆರಂಭಿಸಿದ್ದರು. ಈ ಹಿನ್ನಲೆಯಲ್ಲಿ ಲೋಕಸಭೆಯನ್ನು ನಾಳೆಗೆ ಮುಂದೂಡಲಾಯಿತು.
ರಾಜ್ಯಸಭೆಯಲ್ಲೂ ಅವಿಶ್ವಾಸ ಮಂಡನೆ ಕುರಿತು ತೀವ್ರ ಗದ್ದಲವುಂಟಾಗಿತ್ತು. ಕಲಾಪದ ವೇಳೆ ಮಾತನಾಡಿದ ಚಂದ್ರಬಾಬು ನಾಯ್ಡು ಅವರು. ಇದು ದೇಶ ಮತ್ತು ಸಂಸತ್ತಿನ ಹಿತಾಸಕ್ತಿಯಲ್ಲ. ಅವಿಶ್ವಾಸ ನಿರ್ಣಯ ಮಂಡನೆ ಕುರಿತು ಚರ್ಚೆಗೆ ನಾನು ಕಾದು ಕುಳಿತಿದ್ದೇನೆ. ಇದೇ ರೀತಿ ಇನ್ನೆಷ್ಟು ಸಮಯ ಮುಂದುವರೆಯಬೇಕು? ಎಂದು ಪ್ರಶ್ನಿಸಿದರು.
ಒಂದೆಡೆ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ನೀಡಬೇಕೆಂದು ಟಿಡಿಪಿ ನಾಯಕರು ಪ್ರತಿಭಟಿಸುತ್ತಿದ್ದರೆ, ಮತ್ತೊಂದರೆ ಕಾವೇರಿ ನದಿ ನೀರು ವಿವಾದ ಕುರಿತಂತೆ ಚರ್ಚೆ ಅನುಮತಿ ನೀಡಬೇಕೆಂದು ಎಐಎಡಿಎಂಕೆ ಪಕ್ಷದ ನಾಯಕರು ಸದನದ ಬಾವಿಗಿಳಿದು ಪ್ರತಿಭಟಿಸಲು ಆರಂಭಿಸಿದ್ದರು. ಈ ಹಿನ್ನಲೆಯಲ್ಲಿ ರಾಜ್ಯಸಭಾ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.
ಈ ನಡುವೆ ಮೋದಿ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿರುವ ಸಿಎಂ ಚಂದ್ರಬಾಬು ನಾಯ್ಡು ಅವರು, ಕೇಂದ್ರ ಸರ್ಕಾರ ನಮಗೆ ದ್ರೋಹ ಬಗೆದಿದೆ. ಬಿಜೆಪಿ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ.
ವೈಎಸ್ಆರ್ ಕಾಂಗ್ರೆಸ್ ಪಕ್ಷ ರಾಜಕೀಯದ ಆಟವನ್ನು ಆಡುತ್ತಿದ್ದು, ರಾಜ್ಯದ ಹಿತಾಸಕ್ತಿ ಬಗ್ಗೆ ಆ ಪಕ್ಷದ ನಾಯಕರು ಆಲೋಚನೆ ಮಾಡುತ್ತಿಲ್ಲ. ಜನರ ನಂಬಿಕೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಪ್ರಸ್ತುತ ಎದುರಾಗಿರುವ ಎಲ್ಲಾ ವಿವಾದಗಳ ಮಧ್ಯೆ ರಾಜ್ಯ ಅಭಿವೃದ್ಧಇ ಕಾರ್ಯಗಳು ಸ್ಥಗಿತಗೊಳ್ಳಬಾರದೆಂಬ ಉದ್ದೇಶದಿಂದ ಟಿಡಿಪಿ ಸರ್ಕಾರ ಬಹು ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ರಾಜ್ಯ ಬಜೆಟ್ ಹಂಚಿಕೆಯನ್ನು ಟಿಡಿಪಿ ರೂ.1100ಕೋಟಿಗೆ ಹೆಚ್ಚಿಸಿದೆ. ಭವಿಷ್ಯದಲ್ಲಿಯೂ ಇದೇ ರೀತಿಯ ಕಾರ್ಯಗಳು ಮುಂದುವರೆಯಲಿವೆ ಎಂದು ತಿಳಿಸಿದ್ದಾರೆ.
ಕೇಂದ್ರ ಎನ್'ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವಂತೆ ವೈಎಸ್ಆರ್ ಕಾಂಗ್ರೆಸ್ ಪಕ್ಷದ ವೈ.ವಿ.ಸುಬ್ಬಾ ರೆಡ್ಡಿಯವರು ಲೋಕಸಭೆ ಕಾರ್ಯದರ್ಶಿಗಳಿಗೆ ಈ ಹಿಂದೆ ಪತ್ರ ಬರೆದಿದ್ದರು. ಅವಿಶ್ವಾಸ ನಿರ್ಣ ಮಂಡನೆಗೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳಿಂದ ಬೆಂಬಲ ವ್ಯಕ್ತವಾಗಿತ್ತು. ಈಗಾಗಲೇ ತೆಲಗು ದೇಶಂ ಪಕ್ಷದ ವೈಎಸ್ಆರ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದು, ಕಾಂಗ್ರೆಸ್ ಕೂಡ ಬೆಂಬಲ ವ್ಯಕ್ತಪಡಿಸಿದೆ. ಇದರ ಜೊತೆಗೆ ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಹಾಗೂ ಸಮಾಜವಾದಿ ಪಕ್ಷಗಳೂ ಕೂಡ ಅವಿಶ್ವಾಸ ನಿರ್ಣಯ ಬೆಂಬಲಿಸಲು ನಿರ್ಧರಿಸಿವೆ.
ಆಂಧ್ರಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಪಟ್ಟು ಹಿಡಿದಿದ್ದಾರೆ. ತಮ್ಮ ಬೇಡಿಕೆಯನ್ನು ಈಡೇರಿಸದ ಕಾರಣ ಮೋದಿ ವಿರುದ್ಧ ತಿರುಗಿ ಬಿದ್ದ ನಾಯ್ಡು ಅವರು ಎನ್ ಡಿಎ ಮೈತ್ರಿಯಿಂದ ಹೊರ ಬಂದಿದ್ದರು. ಇದರ ಬೆನ್ನಲ್ಲೇ ವೈಎಸ್ಆರ್ ಕಾಂಗ್ರೆಸ್ ಪಕ್ಷ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos