ಅಮರಾವತಿ: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕೆ ಒತ್ತಾಯಿಸಿ ಸಂಸತ್ತಿನ ನೀವು ನಡೆಸುತ್ತಿರುವ ಹೋರಾಟವನ್ನು ದುರ್ಬಲಗೊಳಿಸಬೇಡಿ ಎಂದು ಡಿಟಿಪಿ ಸಂಸದರಿಗೆ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸೋಮವಾರ ಸೂಚಿಸಿದ್ದಾರೆ.
ಇಂದು ಸಂಜೆ ಟೆಲೆಕಾನ್ಫೆರೆನ್ಸ್ ಮೂಲಕ ಪಕ್ಷದ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಟಿಡಿಪಿ ಮುಖ್ಯಸ್ಥ, ಯಾವುದೇ ಕಾರಣಕ್ಕೆ ಕೇಂದ್ರ ವಿರುದ್ಧದ ನಮ್ಮ ಹೋರಾಟ ದುರ್ಬಲಗೊಳ್ಳಬಾರದು. ನಮಗೆ ಸಾರ್ವಜನಿಕ ಹಿತಾಸಕ್ತಿಯೇ ಮುಖ್ಯ. ರಾಜಿ ಮಾಡಿಕೊಳ್ಳದೆ ನಮ್ಮ ಹಕ್ಕಿಗಾಗಿ ಹೋರಾಟ ಮುಂದುವರೆಸಿ ಎಂದು ಕರೆ ನೀಡಿದ್ದಾರೆ.
ಕೇಂದ್ರದ ವಿರುದ್ಧದ ನಮ್ಮ ಹೋರಾಟಕ್ಕೆ ಎಲ್ಲಾ ಪಕ್ಷಗಳಿಂದ ಬೆಂಬಲ ಸಿಗುತ್ತಿದ್ದು, ಇದೇ ಉತ್ಸಾಹದಲ್ಲಿ ಹೋರಾಟ ಮುಂದುವರೆಸಿ. ನಿಮ್ಮೊಂದಿಗೆ ಆಂಧ್ರದ 5 ಕೋಟಿ ಜನರಿದ್ದಾರೆ ಎಂದು ನಾಯ್ಡು ಸಂಸದರಿಗೆ ಹೇಳಿದ್ದಾರೆ. ಅಲ್ಲದೆ ಎಲ್ಲಾ ಟಿಡಿಪಿ ಸಂಸದರು ಸಂಸತ್ ಕಲಾಪಕ್ಕೆ ಕಡ್ಜಾಯವಾಗಿ ಹಾಜರಿರಬೇಕು ಎಂದು ಸೂಚಿಸಿದ್ದಾರೆ.
ಇಂದು ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ಮೋದಿ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ನೀಡಬೇಕೆಂದು ಟಿಡಿಪಿ ಹಾಗೂ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕರು ಪಟ್ಟು ಹಿಡಿದರು. ಆದರೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಅದಕ್ಕೆ ಅವಕಾಶ ನೀಡದಿದ್ದರಿಂದ, ಟಿಡಿಪಿ ಹಾಗೂ ವೈಎಸ್ ಆರ್ ಕಾಂಗ್ರೆಸ್ ಸಂಸದರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರಿಂದ ಸ್ಪೀಕರ್ ಕಲಾಪವನ್ನು ನಾಳೆಗೆ ಮುಂದೂಡಿದ್ದಾರೆ.