ಚಂಡೀಗಢ: ಇರಾಕ್ ನಲ್ಲಿ 3 ವರ್ಷಗಳ ಹಿಂದೆ ಅಪಹರಣಕ್ಕೊಳಗಾಗಿದ್ದ 39 ಭಾರತೀಯರು ಹತ್ಯೆಗೀಡಾಗಿದ್ದಾರೆಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ದೃಢಪಡಿಸಿದ್ದು, ಇಷ್ಟೂ ದಿನ ಕೇಂದ್ರ ಸರ್ಕಾರವೇಕೆ ನಮ್ಮನ್ನು ಕತ್ತಲಲ್ಲಿ ಇರಿಸಿತ್ತು ಎಂದು ಸಂತ್ರಸ್ತ ಕುಟುಂಬಸ್ಥರು ಪ್ರಶ್ನೆ ಮಾಡಿದ್ದಾರೆ.
ನಿನ್ನೆಯಷ್ಟೇ ರಾಜ್ಯಸಭೆಯಲ್ಲಿ ಮಾತನಾಡಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಅಪಹರಣಕ್ಕೊಳಗಾಗಿದ್ದ 39 ಭಾರತೀಯರನ್ನು ವರ್ಷಗಳ ಹಿಂದೆಯೇ ಇಸಿಸ್ ಉಗ್ರರು ಹತ್ಯೆ ಮಾಡಿದ್ದು, ಸಾಮೂಹಿಕ ಸಮಾಧಿ ಮಾಡಿದ್ದಾರೆ. ಡಿಎನ್ಎ ಪರೀಕ್ಷೆ ಮೂಲಕ ಹತ್ಯೆಗೀಡಾಗಿದ್ದ ಭಾರತೀಯರನ್ನು ಗುರ್ತಿಸಲಾಗಿದೆ ಎಂದು ಹೇಳಿದ್ದರು.
ಕೇಂದ್ರ ಸರ್ಕಾರದ ಮಾಹಿತಿ ನೀಡುತ್ತಿದ್ದಂತೆಯೇ ಸಂತ್ರಸ್ತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕೆಲವರ ಕುಟುಂಬಸ್ಥರು ಕೇಂದ್ರ ಸರ್ಕಾರದಿಂದ ನಮಗೆ ಈ ಬಗ್ಗೆ ಅಧಿಕೃತ ಮಾಹಿತಿಗಳು ಬಂದಿಲ್ಲ ಎಂದು ಹೇಳುತ್ತಿದ್ದರೆ, ಮತ್ತೆ ಕೆಲವರು ಡಿಎನ್ಎ ಪರೀಕ್ಷೆಯ ವರದಿಗಳಿಗಾಗಿ ಆಗ್ರಹಿಸುತ್ತಿದ್ದಾರೆ. ಅಲ್ಲದೆ. ಭಾರತದಲ್ಲಿ ಡಿಎನ್ಎ ಪರೀಕ್ಷೆ ನಡೆಸುವಂತೆ ಆಗ್ರಹಿಸಿದ್ದಾರೆ.
ತಮ್ಮ ಸಹೋದರ ನಿಶಾನ್ (31)ನನ್ನು ಕಳೆದುಕೊಂಡ ದುಃಖದಲ್ಲಿ ಪ್ರತಿಕ್ರಿಯೆ ನೀಡಿರುವ ಸರ್ವಾನ್ ಎಂಬುವವರು, ಇಷ್ಟೂ ವರ್ಷಗಳ ಕಾಲ ಸರ್ಕಾರ ನಮ್ಮನ್ನೇಕೆ ಕತ್ತಲಲ್ಲಿ ಇರಿಸಿತ್ತು ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ಇದೀಗ ಆಘಾತಕಾರಿ ಹೇಳಿಕೆಗಳನ್ನು ನೀಡುತ್ತಿದೆ. ಸಚಿವೆ ಸುಷ್ಮಾ ಸ್ವರಾಜ್ ಅವರನ್ನು 11 ರಿಂದ 12 ಬಾರಿ ನಾವು ಭೇಟಿ ಮಾಡಿದ್ದೆವು. ಈ ವೇಳೆ ನಮಗೆ ದೊರಕಿರುವ ಮಾಹಿತಿಗಳ ಪ್ರಕಾರ ನಾಪತ್ತೆಯಾಗಿರುವ ಭಾರತೀಯರು ಬದುಕಿದ್ದಾರೆಂದು ಹೇಳಿದ್ದರು. ಹರ್ಜಿತ್ ಮಸಿಹ್ ಸುಳ್ಳುಗಾರ ಎಂದು ಹೇಳಿದ್ದರು. ನಿಮ್ಮ ಮೂಲಗಳು ಭಾರತೀಯರು ಬದುಕಿದ್ದಾರೆಂದು ಹೇಳುತ್ತಿತ್ತು. ಇದೀಗ ಏನಾಯಿತು?... ಸುಳ್ಳು ಹೇಳಿಕೆಗಳನ್ನು ನೀಡುವ ಬದಲಿಗೆ, ಈ ಹಿಂದೆಯೇ ನಮಗೆ ಮಾಹಿತಿಗಳಿಲ್ಲ ಎಂದು ಸರ್ಕಾರ ಹೇಳಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಸರ್ಕಾರ ಅತ್ಯಂತ ದೊಡ್ಡ ವೈಫಲ್ಯ. ಪ್ರಸ್ತುತ ಹತ್ಯೆಗೀಡಾಗಿರುವ ಹಲವು ಭಾರತೀಯರು ಪಂಜಾಬ್ ಮೂಲದವರಾಗಿದ್ದಾರೆ. ಕೇರಳದಲ್ಲಿರುವ ನರ್ಸ್ ಗಳನ್ನು ರಕ್ಷಣೆ ಮಾಡಲಾದ ಸರ್ಕಾರ ಭಾರತೀಯರನ್ನು ರಕ್ಷಣೆ ಮಾಡುವುದರಲ್ಲೇಕೆ ವಿಫಲವಾಯಿತು. ಹಲವು ತಿಂಗಳ ಕಾಲ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಬೇಕೆಂದು ಸಚಿವರ ಬಳಿ ಮನವಿ ಮಾಡಿಕೊಂಡಿದ್ದೆವು. ಆದರೆ ನಮಗೆ ಅವರನ್ನು ಭೇಟಿ ಮಾಡುವ ಅವಕಾಶಗಳು ದೊರೆಯಲಿಲ್ಲ ಎಂದಿದ್ದಾರೆ.
ಹತ್ಯೆಗೀಡಾಗಿರುವ ಮಂಜಿಂದರ್ ಸಿಂಗ್ ಅವರ ಸಹೋದರ ಗುರ್ಪಿಂದರ್ ಕೌರ್ ಅವರೂ ಕೂಡ ಇದೇ ರೀತಿಯ ಪ್ರಶ್ನೆಯನ್ನು ಕೇಂದ್ರ ಸರ್ಕಾರಕ್ಕೆ ಕೇಳಿದ್ದಾರೆ.
ನಾಪತ್ತೆಯಾಗಿರುವ ಭಾರತೀಯರು ಬದುಕಿದ್ದಾರೆಂದು ಕೇಂದ್ರ ಹೇಳುತ್ತಿತ್ತು. ಇದೀಗ ಇದ್ದಕ್ಕಿದ್ದಂತೆಯೇ ಹತ್ಯೆಗೀಡಾಗಿದ್ದಾರೆಂದು ಹೇಳುತ್ತಿದೆ. ನಮಗೆ ಈ ಬಗ್ಗೆ ಸರ್ಕಾರ ಯಾವುದೇ ಮಾಹಿತಿ ನೀಡಿರಲಿಲ್ಲ. ಇದೀಗ ಟಿವಿಗಳಲ್ಲಿ ಬಂದ ಸುದ್ದಿಗಳಲ್ಲಿ ಮಾಹಿತಿ ತಿಳಿಯಿತು. ಈ ರೀತಿ ಹೇಗೆ ನಡೆಯಿತು ಎಂದು ಸರ್ಕಾರವನ್ನು ಕೇಳುತ್ತಿದ್ದೇನೆಂದು ತಿಳಿಸಿದ್ದಾರೆ.
39 ಮಂದಿ ಭಾರತೀಯರು ಟರ್ಕಿ ಮೂಲಕ ನಿರ್ಮಾಣ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇರಾಕ್ ನಲ್ಲಿ ಉಪಟಳ ಹೆಚ್ಚಿಕೊಂಡಿದ್ದ ಇಸಿಸ್ ಉಗ್ರರು, ವಿದೇಶಿ ಪ್ರಜೆಗಳನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ವಿವಿಧ ರಾಷ್ಟ್ರಗಳ ಪ್ರಜೆಗಳನ್ನು ಬೇರೆ ಬೇರೆ ನೆಲೆಗಳಲ್ಲಿ ಅಡಗಿಸಿಟ್ಟಿದ್ದರು. ಭಾರತೀಯರ ಜೊತೆಗೆ 51 ಬಾಂಗ್ಲಾದೇಶಿ ಕಾರ್ಮಿಕರನ್ನು ಒತ್ತೆಯಾಗಿರಿಸಿಕೊಂಡಿದ್ದರು.
ಭಾರತೀಯರ ಅಪಹರಣ ಕುರಿತಂತೆ ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ಸುಷ್ಮಾ ಸ್ವರಾಜ್ ಅವರು, ಇರಾಕ್ ನಲ್ಲಿ ನಾಪತ್ತೆಯಾಗಿದ್ದ 39 ಭಾರತೀಯರು ಬಾದುಷ್ ಜೈಲಿನಲ್ಲಿರಬಹುದು. ನಾಪತ್ತೆಯಾಗಿರುವ ಭಾರತೀಯರ ಕುಟುಂಬಸ್ಥರನ್ನು ನಾನು ಈ ಹಿಂದೆ ಕೂಡ ಹಲವು ಬಾರಿ ಭೇಟಿ ಮಾಡಿದ್ದೇನೆ. ಆದರೆ, ಈ ಬಾರಿ ಪರಿಸ್ಥಿತಿ ಬದಲಾಗಿದೆ. ಇಸಿಸ್ ಕಪಿಮುಷ್ಟಿಯಿಂದ ಮೊಸುಲ್ ಸ್ವತಂತ್ರಗೊಂಡಿದೆ ಎಂದು ಈ ಹಿಂದೆ ಇರಾಕ್ ಪ್ರಧಾನಿ ಮಂತ್ರಿ ಘೋಷಣೆ ಮಾಡಿದ್ದರು. ಈ ಘೋಷಣೆ ಬಳಿಕ ಇರಾಕ್ ಭೇಟಿ ನೀಡುವಂತೆ ವಿ.ಕೆ.ಸಿಂಗ್ ಅವರಿಗೆ ಸೂಚನೆ ನೀಡಿದ್ದೆ. ಆದರೆ, ಈಗಲೂ ಇರಾಕ್'ನ ಪಶ್ಚಿಮ ಮೊಸುಲ್ ನಲ್ಲಿ ಹೋರಾಟಗಳು ಮುಂದುವರೆಯುತ್ತಿದೆ ಎಂದು ಹೇಳಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos