ನವದೆಹಲಿ: ಇರಾಕ್ ನಲ್ಲಿ ಇಸಿಸ್ ಉಗ್ರರಿಂದ 39 ಭಾರತೀಯರು ಹತ್ಯೆಗೀಡಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬುಧವಾರ ತೀವ್ರ ಸಂತಾಪ ಸೂಚಿಸಿದ್ದಾರೆ.
ಭಾರತೀಯರ ಹತ್ಯೆ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, 2014ರಲ್ಲಿ ಅಪರಹರಣಕ್ಕೊಳಗಾಗಿದ್ದ 39 ಭಾರತೀಯರು ಸಾವನ್ನಪ್ಪಿದ್ದಾರೆಂದು ದೃಢವಾಗಿದೆ. ಸುದ್ದಿ ಕೇಳಿ ಆಘಾತವಾಯಿತು. ತಮ್ಮ ಪ್ರೀತಿ ಪಾತ್ರರು ಮರಳಿ ಬರುತ್ತಾರೆಂಬ ವಿಶ್ವಾಸದಲ್ಲಿದ್ದ ಕುಟುಂಬಸ್ತರಿಗೆ ತೀವ್ರ ಸಂತಾಪವನ್ನು ಸೂಚಿಸುತ್ತೇನೆ. ನನ್ನ ಆಲೋಚನೆ ಹಾಗೂ ಪ್ರಾರ್ಥನೆ ಸದಾ ನಿಮ್ಮೊಂದಿಗಿರುತ್ತದೆ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ರಾಜ್ಯಸಭೆಯಲ್ಲಿ ಮಾತನಾಡಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಇರಾಕ್ ನಲ್ಲಿ ನಾಪತ್ತೆಯಾಗಿದ್ದ 39 ಭಾರತೀಯರನ್ನು ಇಸಿಸ್ ಉಗ್ರರು ಹತ್ಯೆ ಮಾಡಿದ್ದು, ಸಾಮೂಹಿಕ ಸಮಾಧಿ ಮಾಡಿದ್ದಾರೆಂಬ ಆಘಾತಕಾರಿ ಮಾಹಿತಿಯನ್ನು ದೃಢಪಡಿಸಿದ್ದರು.