160 ವರ್ಷಗಳ ಹೋರಾಟಕ್ಕೆ ಜಯ, ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಬೆಳಗಿದ ಕಾರ್ತಿಕ ದೀಪ; ಭಕ್ತರಿಗೆ ಧನ್ಯವಾದ ತಿಳಿಸಿದ CRPF

ಮಧುರೈ: ತಮಿಳುನಾಡಿನ ಮಧುರೈ ಜಿಲ್ಲೆಯ ತಿರುಪ್ಪರಂಕುಂದ್ರಂ ಬೆಟ್ಟದ ಮೇಲ್ಭಾಗದಲ್ಲಿ ಶನಿವಾರ ಐತಿಹಾಸಿಕ ಕಾರ್ತಿಕ ದೀಪವನ್ನು ಬೆಳಗಿಸಲಾಗಿದೆ.
ದಶಕಗಳಿಂದ ಈ ಸ್ಥಳದಲ್ಲಿ ದೀಪ ಬೆಳಗಿಸುವ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದ ಭಕ್ತರು ಮತ್ತು ಹಿಂದೂ ಸಂಘಟನೆಗಳ ಪ್ರಯತ್ನಕ್ಕೆ ಕೊನೆಗೂ ಜಯ ಸಿಕ್ಕಿದೆ.
ಬಿಗಿ ಸಿಆರ್‌ಪಿಎಫ್ ಯೋಧರ ಭದ್ರತೆಯ ನಡುವೆ ಸಂಜೆ 5 ಗಂಟೆಗೆ ಬೆಟ್ಟದ ಮೇಲಿರುವ 'ದೀಪತ್ತೂಣ್' (ಕಲ್ಲಿನ ಸ್ತಂಭ) ಮೇಲೆ ದೀಪ ಬೆಳಗಿಸಲಾಯಿತು. ಈ ಐತಿಹಾಸಿಕ ಕ್ಷಣಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.
ಸುಪ್ರೀಂಕೋರ್ಟ್ ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿಗಳ ಸಮ್ಮುಖದಲ್ಲಿ ದೀಪ ಬೆಳಗಿಸಲಾಯಿತು. ಈ ಸಂದರ್ಭದಲ್ಲಿ ಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ಮುರುಗನ್ ದೇವರ ಪರ ಘೋಷಣೆಗಳು ಮೊಳಗಿದವು. ದೀಪ ಬೆಳಗುತ್ತಿದ್ದಂತೆ ಭಕ್ತರು ಸಂಭ್ರಮದಿಂದ ಜಯಘೋಷಗಳನ್ನು ಕೂಗಿದರು.
160 ವರ್ಷಗಳ ಹೋರಾಟಕ್ಕೆ ಸಿಕ್ಕ ಜಯ
ತಿರುಪ್ಪರಂಕುಂದ್ರಂ ಬೆಟ್ಟದ ಮೇಲ್ಭಾಗದಲ್ಲಿ ಕಾರ್ತಿಕ ದೀಪ ಬೆಳಗಿಸುವ ವಿಚಾರ ಹಲವು ದಶಕಗಳಿಂದ ವಿವಾದಕ್ಕೆ ಕಾರಣವಾಗಿತ್ತು.
ಈ ಸ್ಥಳದಲ್ಲಿ ದೀಪ ಬೆಳಗಿಸಲು ಈ ಹಿಂದೆ 1862 ಮತ್ತು 1912ರಲ್ಲೂ ಪ್ರಯತ್ನಗಳು ನಡೆದಿದ್ದವು. ಆದರೆ ಬ್ರಿಟಿಷರ ಆಳ್ವಿಕೆಯ ಸಂದರ್ಭದಲ್ಲಿ ಆ ಪ್ರಯತ್ನಗಳು ವಿಫಲವಾಗಿದ್ದವು ಎಂದು ವರದಿಗಳು ತಿಳಿಸಿವೆ.
ಆದರೆ 19ನೇ ಶತಮಾನದ ಮಧ್ಯಭಾಗಕ್ಕೂ ಮೊದಲು ಬೆಟ್ಟದ ಮೇಲ್ಭಾಗದಲ್ಲಿ ದೀಪ ಬೆಳಗಿಸಲಾಗಿತ್ತೇ ಅಥವಾ ಈ ಸಂಬಂಧ ಯಾವುದೇ ಪ್ರಯತ್ನಗಳು ನಡೆದಿದ್ದವೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.
ದೇವರ ಕೃಪೆಯಿಂದ ದೀಪ ಬೆಳಗಿಸಲು ಸಾಧ್ಯವಾಯಿತು: ಸಿಆರ್‌ಪಿಎಫ್ ಐಜಿ
ದೀಪ ಬೆಳಗಿಸುವ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಿದ್ದ ಸಿಆರ್‌ಪಿಎಫ್ ದಕ್ಷಿಣ ವಲಯದ ಐಜಿ ವಿಕ್ರಮ್ ಈ ಐತಿಹಾಸಿಕ ಕ್ಷಣದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
"ದೇವರ ಕೃಪೆ ಮತ್ತು ಎಲ್ಲರ ಸಹಕಾರದಿಂದ ದೀಪ ಬೆಳಗಿಸಲು ನಾವು ಸಾಧ್ಯವಾಯಿತು. ಇಡೀ ಪಟ್ಟಣವೇ ಸಂಭ್ರಮಿಸುತ್ತಿರುವುದನ್ನು ನಾನು ನೋಡಿದೆ" ಎಂದು ಅವರು ಹೇಳಿದ್ದಾರೆ.
ದೀಪ ಬೆಳಗಿಸುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಟ್ಟದ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಸಾವಿರಾರು ಭಕ್ತರು ಈ ಅಪರೂಪದ ಕ್ಷಣವನ್ನು ಕಣ್ತುಂಬಿಕೊಂಡರು.
ತಿರುಪ್ಪರಂಕುಂದ್ರಂ ಬೆಟ್ಟದ ದೀಪ ವಿವಾದವು ಇತ್ತೀಚಿನ ದಿನಗಳಲ್ಲಿ ತಮಿಳುನಾಡಿನಲ್ಲಿ ರಾಜಕೀಯ ಮತ್ತು ಧಾರ್ಮಿಕ ವಲಯಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಇದೀಗ ಬೆಟ್ಟದ ಮೇಲ್ಭಾಗದಲ್ಲಿ ದೀಪ ಬೆಳಗಿರುವುದು ದಶಕಗಳ ಹೋರಾಟದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



