ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ನವದೆಹಲಿ; ಫೇಸ್ಬುಕ್ ದತ್ತಾಂಶ ದುರ್ಬಳಕೆ ಆರೋಪ ಪ್ರಕರಣ ಸಂಬಂಧ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿರುವ ಬಿಜೆಪಿ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಬಿಜೆಪಿಯನ್ನು 'ಸುಳ್ಳಿನ ಕಾರ್ಖಾನೆ' ಎಂದು ಗುರುವಾರ ಜರಿದಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿಯವರು, ಬಿಜೆಪಿ ಸುಳ್ಳಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದೆ. 2012ರಲ್ಲಿ ಕಾಂಗ್ರೆಸ್ ಒಳನುಸುಳುವುದು ಹಾಗೂ ಅದನ್ನು ನಾಶಪಡಿಸುವುದಕ್ಕೆ ಕೇಂಬ್ರಿಜ್ ಅನಾಟಿಲಿಕಾ ಜೊತೆಗೆ ಹೇಗೆ ಕೈಜೋಡಿಸಲಾಯಿತು ಎಂಬುದರ ಬಗ್ಗೆ ಪತ್ರಕರ್ತರೊಬ್ಬರು ಸ್ಫೋಟಕ ಸುದ್ದಿಯನ್ನು ಬರೆದಿದ್ದರು. ಕೂಡಲೇ ಬಿಜೆಪಿ ಸಂಪುಟ ಸಚಿವರೊಂದಿಗೆ ಸುಳ್ಳು ಹೇಳಿ, ಕಾಂಗ್ರೆಸ್ ಕೇಂಬ್ರಿಜ್ ಅನಾಲಿಟಿಕಾ ಜೊತೆಗೆ ಕೆಲಸ ಮಾಡುತ್ತಿದೆ ಎಂದು ಸುಳ್ಳಿನ ಸುದ್ದಿಗಳನ್ನು ಹರಡಿಸಿತು. ನಿಜವಾದ ಸುದ್ಧಿ ನಾಶವಾಗಿ ಹೋಯಿತು ಎಂದು ಹೇಳಿದ್ದಾರೆ.
ಫೇಸ್ಬುಕ್ ದತ್ತಾಂಶ ದುರ್ಬಳಕೆಯಾದ ಸುದ್ದಿ ಬಹಿರಂಗಗೊಳ್ಳುತ್ತಿದಂತೆಯೇ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಕೆಸರೆರಾಚಾಟ ಆರಂಭವಾಗಿದೆ. ಬಿಹಾರ, ಮಹಾರಾಷ್ಟ್ರ ಹರಿಯಾ, ಜಾರ್ಖಾಂಡ್ ಮತ್ತು ದೆಹಲಿ ರಾಜ್ಯಗಳ ಚುನಾವಣೆಯಲ್ಲಿ ಗೆಲವು ಸಾಧಿಸುವ ಸಲುವಾಗಿ ಬಿಜೆಪಿಯೇ ಕಂಪನಿಯೊಂದಿಗೆ ಕೈಜೋಡಿಸಿದೆ ಎಂದು ಈ ಹಿಂದೆ ಕಾಂಗ್ರೆಸ್ ಆರೋಪ ಮಾಡಿತ್ತು.
ಇದಲ್ಲದೆ, ಇರಾಕ್ ನಲ್ಲಿ 39 ಭಾರತೀಯರ ಹತ್ಯೆಗೀಡಾದ ಪ್ರಕರಣದ ಕುರಿತು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ನಮ್ಮ ವಿರುದ್ಧ ಆರೋಪ ಮಾಡುತ್ತಿದೆ ಎಂದೂ ಕೂಡ ಹೇಳಿತ್ತು.