ಅಮೃತಸರ : ಇರಾಕ್ ನ ಮೋಸುಲ್ ನಲ್ಲಿ ಐಎಸ್ ಐಎಸ್ ಉಗ್ರರಿಂದ ಹತ್ಯೆಯಾದ 39 ಭಾರತೀಯರಲ್ಲಿ ಒಬ್ಬರಾದ ಮಂಜಿಂದರ್ ಸಿಂಗ್ ತಂಗಿ ಗುರುಪಿಂದರ್ ಕೌರ್ ಸರ್ಕಾರದ ವಿರುದ್ಧ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಕೇಂದ್ರಸರ್ಕಾರ ಈವರೆಗೂ ತಮ್ಮನ್ನೂ ಭೇಟಿಯಾಗಿಲ್ಲ. ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಹಲವು ಬಾರಿ ಭೇಟಿಯಾಗಿದ್ದರೂ ನಮಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಹಿಂಸಾತ್ಮಕ ಪ್ರತಿಭಟನೆ ಮಾಡಲ್ಲ, ಶಾಂತಿಯುತವಾಗಿ ಪ್ರತಿಭಟನೆ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಇರಾಕ್ ನಲ್ಲಿ ಹತ್ಯೆಯಾದವರ ಕುಟುಂಬಗಳಿಗೆ ನಾಳೆಯೊಳಗೆ ಪರಿಹಾರ ಘೋಷಿಸುವಂತೆ ಸೂಚಿಸಲಾಗಿದೆ. ಅಷ್ಟರೊಳಗೆ ಸರ್ಕಾರ ಮಾಡದಿದ್ದರೆ ಜಂಥರ್ ಮಂಥರ್ ಮುಂಭಾಗ ನಾಳೆಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಮಂಜಿಂದರ್ ಸಿಂಗ್ ಅಳಿಯ ವಿಜಯ್ ಕುಮಾರ್ ಹೇಳಿದ್ದಾರೆ.
2014ರಲ್ಲಿ ಮೋಸುಲ್ ನಲ್ಲಿ ನಾಪತ್ತೆಯಾಗಿದ್ದ 39 ಭಾರತೀಯರು ಐಎಸ್ ಉಗ್ರರ ಗುಂಪಿನಿಂದ ಹತ್ಯೆಯಾಗಿದ್ದಾರೆ ಎಂದು ಮಾರ್ಚ್ 20 ರಂದು ರಾಜ್ಯಸಭೆಯಲ್ಲಿ ಸುಷ್ಮಾ ಸ್ವರಾಜ್ ಹೇಳಿದ್ದರು.