ಬಿಜೆಪಿ ಸಂಸದೀಯ ಸಭೆಯಲ್ಲಿ ಪ್ರಧಾನಿ ಮೋದಿ
ನವದೆಹಲಿ: ಪ್ರತಿಪಕ್ಷಗಳು ಚುನಾವಣೆಯಲ್ಲಿನ ನಿರಂತರ ಸೋಲಿನ ಹತಾಶೆಯಿಂದ ನಮ್ಮ ಸರ್ಕಾರದ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಆರೋಪಿಸಿದ್ದಾರೆ.
ಇಂದು ಬಿಜೆಪಿ ಸಂಸದೀಯ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಸಂಸದರು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸತ್ಯವನ್ನು ಜನತೆಗೆ ತಲುಪಿಸುವ ಯತ್ನ ಮಾಡಬೇಕು ಎಂದು ಸೂಚಿಸಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ನಾಯಕರಾದ ಪ್ರಕಾಶ್ ಜಾವಡೇಕರ್ ಮತ್ತು ಅನಿಲ್ ಬಲೂನಿ ಅವರು, ಪ್ರತಿಪಕ್ಷಗಳು ಅನಗತ್ಯವಾಗಿ ಸಂಸತ್ ಕಲಾಪಕ್ಕೆ ಅಡ್ಡಿಪಡಿಸುತ್ತಿವೆ. ಈ ವಿಚಾರವನ್ನು ಮುಂದಿನ ಮೂರು ದಿನಗಳಲ್ಲಿ ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ ಜನತೆಗೆ ತಿಳಿಸಬೇಕು ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಂಸದರಿಗೂ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಪಕ್ಷ ಮುಂದಿನ ವರ್ಷದ ಲೋಕಸಭೆ ಚುನಾವಣೆಗೆ ಸಿದ್ಧಗೊಳ್ಳಬೇಕಿದ್ದು, ಎಲ್ಲಾ ಸಂಸದರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬೂತ್ ಮಟ್ಟದಿಂದಲೇ ಪಕ್ಷವನ್ನು ಸಂಘಟಿಸಬೇಕು ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ಏಪ್ರಿಲ್ 14ರಂದು ಡಾ.ಬಿ.ಆರ್ ಅಂಬೇಡ್ಕರ್ ಜನ್ಮದಿನ ಮತ್ತು ಮೇ 5ರಂದು ಗ್ರಾಮ ಸ್ವರಾಜ್ ಅಭಿಯಾನದ ಅಂಗವಾಗಿ ಬಿಜೆಪಿ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಬಲೂನಿ ಅವರು ತಿಳಿಸಿದ್ದಾರೆ.