ನವದೆಹಲಿ; ಬಳಕೆದಾರರು ವೈಯಕ್ತಿಕ ಮಾಹಿತಿ ಸೋರಿಕೆ ಪ್ರಕರಣ ಸಂಬಂಧ ಕೇಂಬ್ರಿಜ್ ಅನಾಲಿಟಿಕಾ ಕಂಪನಿಗೆ ಕೇಂದ್ರ ಸರ್ಕಾರ ಶುಕ್ರವಾರ ನೋಟಿಸ್ ನೀಡಿದೆ.
ತಾಂತ್ರಿಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಕೇಂಬ್ರಿಜ್ ಅನಾಲಿಟಿಕಾಗೆ ನೋಟಿಸ್ ಜಾರಿ ಮಾಡಿದ್ದು, ಭಾರತದ ಬಳಕೆದಾರರ ದತ್ತಾಂಶ ಬಳಕೆ ಮಾಡಿಕೊಂಡ ಆರೋಪ ಎದುರಿಸುತ್ತಿರುವ ಬಗ್ಗೆ ಮಾಹಿತಿ ನೀಡಲು ನೋಟಿಸ್ ನಲ್ಲಿ ಸೂಚಿಸಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಮಾ.31ರ ಒಳಗೆ ಉತ್ತರಿಸಲು ಕೇಂಜ್ರಿಜ್ ಅನಾಲಿಟಿಕಾ ಕಂಪನಿಗೆ ತಿಳಿಸಿದೆ. ಭಾರತದಲ್ಲಿನ ಬಳಕೆದಾರರ ಮಾಹಿತಿ ಅನ್ಯ ಉದ್ದೇಶಕ್ಕೆ ಬಳಸಿಕೊಂಡಿದ್ದೀರಾ? ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದೀರಾ ಎಂದು ಕೇಂದ್ರ ಪ್ರಶ್ನಿಸಿದೆ.
ಕೆಲ ದಿನಗಳ ಹಿಂದಷ್ಟೇ ಕೇಂಬ್ರಿಜ್ ಅನಾಲಿಟಿಕಾಗೆ ಎಚ್ಚರಿಕೆ ನೀಡಿದ್ದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರವಿಶಂಕರ್ ಪ್ರಸಾದ್ ಅವರು, ಭಾರತೀಯ ಚುನಾವಣೆ ಪ್ರಕ್ರಿಯೆ ಮೇಲೆ ಯಾವುದೇ ರೀತಿಯ ಅನಪೇಕ್ಷಿತ ಪ್ರಭಾವ ಬೀರುವ ಘಟನೆಗಳು ಕಾಣಿಸಿದರೆ ಫೇಸ್'ಬುಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದರು.