ದೇಶ

ವಯಸ್ಕರ ಮದುವೆಗೆ ಅಡ್ಡಿಪಡಿಸುವುದು ಸಂಪೂರ್ಣ ಅಕ್ರಮ: ಸುಪ್ರೀಂ ಕೋರ್ಟ್ ತೀರ್ಪು

Sumana Upadhyaya

ನವದೆಹಲಿ: ಇಬ್ಬರು ವಯಸ್ಕರು ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದರೆ ಅದಕ್ಕೆ ಅಡ್ಡಿಪಡಿಸುವುದು ಅಥವಾ ತೊಂದರೆ ನೀಡುವುದು ಸಂಪೂರ್ಣವಾಗಿ ಅಕ್ರಮವಾಗಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ.

ಇಬ್ಬರು ವಯಸ್ಕ ವ್ಯಕ್ತಿಗಳು ಮದುವೆಯಾಗಲು ನಿರ್ಧರಿಸಿ ಪ್ರೀತಿಯಿಂದ ಬದುಕಲು ತೀರ್ಮಾನಿಸುವುದು ವ್ಯಕ್ತಿಗಳ ಮೂಲಭೂತ ಹಕ್ಕಾಗಿದ್ದು ಅದು ಅಂತಿಮ. ಈ ವಿಷಯದಲ್ಲಿ ಯಾರಿಗೂ ಅಡ್ಡಿಪಡಿಸಲು ಹಕ್ಕು ಇರುವುದಿಲ್ಲ ಎನ್ನುವ ಮೂಲಕ ಸುಪ್ರೀಂ ಕೋರ್ಟ್ ಪೋಷಕರು, ಸಮಾಜ, ಸರ್ಕಾರಗಳಿಗೆ ಅಂತಿಮ ಎಚ್ಚರಿಕೆ ರವಾನಿಸಿದೆ.

ಮರ್ಯಾದ ಹತ್ಯೆಗೆ ಸಂಬಂಧಪಟ್ಟಂತೆ ಇಲ್ಲಿಯವರೆಗೆ ಇದ್ದ ನಿರ್ದಿಷ್ಟ ಕಾನೂನಿನ ಕೊರತೆಯನ್ನು ಸುಪ್ರೀಂ ಕೋರ್ಟ್ ನ ಇಂದಿನ ತೀರ್ಪು ಭರಿಸಿದೆ ಎಂದು ಹೇಳಬಹುದು.
ಸರ್ಕಾರೇತರ ಸಂಘಟನೆ ಶಕ್ತಿ ವಾಹಿನಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಮೂವರು ಸದಸ್ಯರನ್ನೊಳಗೊಂಡ ನ್ಯಾಯಪೀಠ, ಪರಸ್ಪರ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ ಅಥವಾ ಮದುವೆಯಾದ ಜೋಡಿಗೆ ಕಿರುಕುಳ ನೀಡುವ ಹಕ್ಕು ಯಾರಿಗೂ ಇರುವುದಿಲ್ಲ ಎಂದು ಆದೇಶ ನೀಡಿದೆ.

ಮದುವೆ ಸಿಂಧುವೇ ಅಥವಾ ಅಸಿಂಧುವೇ ಮತ್ತು ಮಕ್ಕಳು ಹುಟ್ಟಿದ್ದರೆ ಅದು ಕಾನೂನುಬದ್ಧವೇ ಅಲ್ಲವೇ ಎಂದು ತೀರ್ಮಾನಿಸುವ ಕೆಲಸ ನ್ಯಾಯಾಲಯಗಳದ್ದಾಗಿರುತ್ತದೆಯೇ ಹೊರತು ಇದರಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಘಟನೆ ಮಧ್ಯೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ತಿಳಿಸಿದ್ದಾರೆ.

ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಖಾಪ್ ಪಂಚಾಯತ್ ಗಳ ಪ್ರತಿನಿಧಿಯೊಬ್ಬರು, ಮರ್ಯಾದಾ ಹತ್ಯೆ ವಿಷಯದಲ್ಲಿ ಪಂಚಾಯತ್ ಗಳನ್ನು ಹೇಗೆ ಆಕ್ಷೇಪಾರ್ಹವಾಗಿ ಬಿಂಬಿಸಲಾಗುತ್ತಿದೆ ಎಂಬ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ನಾವು ಆತ್ಮಸಾಕ್ಷಿಯಂತೆ ನಡೆದುಕೊಳ್ಳುತ್ತೇವೆ ಎಂದು ಖಾಪ್ ಪಂಚಾಯತ್ ಪರ ಹಿರಿಯ ವಕೀಲ ವಾದ ಮಂಡಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿ ತೀರ್ಪು ನೀಡಿದ ಮುಖ್ಯ ನ್ಯಾಯಾಧೀಶ, ಹಾಗೆಂದೂ ಹೇಳಬೇಡಿ ಎಂದು ತರಾಟೆಗೆ ತೆಗೆದುಕೊಂಡರು.

ಅಂತರ್ಜಾತಿ ಮತ್ತು ಅಂತರ್ ಧರ್ಮೀಯ ವಿವಾಹಗಳ ಕುರಿತು ಖಾಪ್ ಪಂಚಾಯತ್ ಗಳು ನೀಡಿರುವ ತೀರ್ಪಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.

SCROLL FOR NEXT