ನವದೆಹಲಿ: ತಮ್ಮ ವಿರುದ್ಧ ದ್ವೇಷ ಸಾಧಿಸಲು ಕೆಲವು ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಬಗ್ಗೆ ಬರುತ್ತಿರುವ ವರದಿಯನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ತಮ್ಮ ವಿರುದ್ಧ ದ್ವೇಷ ಸಾಧಿಸಲು ಪ್ರಯತ್ನಿಸುವವರನ್ನು ತಾವೆಂದಿಗೂ ದ್ವೇಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ನನ್ನ ವಿರುದ್ಧ ದ್ವೇಷ ಸಾಧಿಸಲು ಪ್ರಯತ್ನಿಸುವವರನ್ನು ನಾನೆಂದಿಗೂ ದ್ವೇಷಿಸುವುದಿಲ್ಲ. ಅವರು ಸುಳ್ಳು ಸುದ್ದಿ ಮತ್ತು ವಾಸ್ತವವನ್ನು ತಿರುಚಿ ನನ್ನ ಬಗ್ಗೆ ಹೇಳಬಹುದು. ಅವರಿಗೆ ಇದೊಂದು ಉದ್ಯೋಗ, ಹಣಕ್ಕಾಗಿ ನನ್ನ ವಿರುದ್ಧ ದ್ವೇಷ ಮತ್ತು ಸುಳ್ಳು ಸುದ್ದಿಯನ್ನು ಮಾರಾಟ ಮಾಡಬಹುದು, ಅದು ಕೊಬ್ರಪೋಸ್ಟ್ ಬಹಿರಂಗ ಶೋದಂತೆ. ನನ್ನ ಬಗ್ಗೆ ಸುಳ್ಳು ಸುದ್ದಿ ಹರಡಿ ಜೀವನ ಸಾಗಿಸುತ್ತಿದ್ದರೆ ಮಾಡಲಿ ಬಿಡಿ ಎಂದಿದ್ದಾರೆ.
ತನಿಖಾ ಸುದ್ದಿ ಪೋರ್ಟಲ್ ಆಗಿರುವ ಕೊಬ್ರಪೊಸ್ಟ್ ಇತ್ತೀಚೆಗೆ ಸ್ಟಿಂಗ್ ಆಪರೇಶನ್ ವೊಂದನ್ನು ನಡೆಸಿರುವುದನ್ನು ಬಿಡುಗಡೆ ಮಾಡಿ 17 ಮಾಧ್ಯಮ ಸಂಸ್ಥೆಗಳ ಹಿರಿಯ ಉದ್ಯೋಗಿಗಳು ಹಣಕ್ಕಾಗಿ ಕೋಮು ಸೌಹಾರ್ದಕ್ಕೆ ಧಕ್ಕೆಯನ್ನುಂಟುಮಾಡುವ ಸುದ್ದಿಗಳ ಪ್ರಕಟಣೆಗೆ ಉತ್ತೇಜನ ನೀಡುತ್ತಿವೆ ಎಂದಿದೆ.