ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಮುಸ್ಲಿಂ ಹಾಗೂ ಕೆಳಜಾತಿಯವರ ವಿರೋಧಿ ಎಂಬ ಗ್ರಹಿಕೆ ಇದ್ದು ಇದು 2019ರ ಲೋಕಸಭೆ ಚುನಾವಣೆ ವೇಳೆ ಪ್ರಮುಖ ಸವಾಲಾಗಲಿದೆ ಎಂದು ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.
ಸದ್ಯ ಕೇಂದ್ರ ಸರ್ಕಾರ ಏನು ಮಾಡಿದ್ದರೂ ಅದು ಎಲ್ಲರಿಗಾಗಿ. ಅಲ್ಪಸಂಖ್ಯಾತ ವರ್ಗದವರಿಗಾಗಿಯೂ ಸಾಕಷ್ಟು ಯೋಜನೆಗಳನ್ನು ನೀಡಿದೆ. ಆದರೂ ಜನರ ಗ್ರಹಿಕೆ ಮಾತ್ರ ಬದಲಾಗಿಲ್ಲ ಎಂದು ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.
ಪ್ರತಿಪಕ್ಷಗಳು ಇದರ ಲಾಭ ಪಡೆದುಕೊಳ್ಳುತ್ತಿವೆ. ತನ್ನ ಬಗೆಗಿನ ಜನರ ಧೋರಣೆಯನ್ನು ಬದಲಿಸುವ ನಿಟ್ಟಿನಲ್ಲಿ ಬಿಜೆಪಿ ಶ್ರಮಿಸಬೇಕಿದೆ ಎಂದು ಪಾಸ್ವಾನ್ ಹೇಳಿದ್ದಾರೆ.
ಭಾರತದಲ್ಲಿ 1.3 ಬಿಲಿಯನ್ ಜನರಿದ್ದಾರೆ. ಅದರಲ್ಲಿ ಶೇಖಡ 80ರಷ್ಟು ಹಿಂದೂಗಳು ಮತ್ತು 14ರಷ್ಟು ಮುಸ್ಲಿಂರಿದ್ದಾರೆ. ಹಿಂದೂ ಜನಸಂಖ್ಯೆಯಲ್ಲಿ ಹಿಂದುಳಿದವರು ಶೇಖಡ 10ರಷ್ಟು ಇದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂ ರಾಷ್ಟ್ರೀಯವಾದಿ ಅಜೆಂಡಾ ಜನಸಂಖ್ಯೆಯನ್ನು ಧ್ರುವೀಕರಿಸುತ್ತಿದೆ.
2014ರಲ್ಲಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಹಿಂದೂ ಸಂಘಟನೆಗಳು ಹಾಗೂ ಗೋರಕ್ಷಕರು ದೇಶಾದ್ಯಂತ ಮುಸ್ಲಿಂ ಹಾಗೂ ದಲಿತರನ್ನು ಹತ್ಯೆ ಮಾಡಿದ್ದರು. ಇನ್ನು ಕೆಲ ರಾಜ್ಯಗಳು ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದ್ದವು ಎಂದು ಹೇಳಿದ್ದಾರೆ.