ನವದೆಹಲಿ: ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ದೆಹಲಿ ಉದ್ಯಮಿಯೊಬ್ಬರಿಗೆ ಹಸುವೊಂದು ಡಿಕ್ಕಿ ಹೊಡೆದ ಪರಿಣಾಮ ಅವರ ಕಾಲಿಗೆ ಗಾಯವಾಗಿದೆ. ಇದೀಗ ಉದ್ಯಮಿಯು ಅಪಘಾತಕ್ಕೆ ಕಾರಣವಾದ ಹಸುವಿನ ವಿರುದ್ಧವೇ ಪೋಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ವಿಚಿತ್ರವೆನಿಸಿದರೂ ಇದು ಸತ್ಯ. ದೆಹಲಿ ಮೂಲದ ಉದ್ಯಮಿ ಮೊಹಮ್ಮದ್ ಶಕೀಲ್ ದೆಹಲಿಯ ಸರ್ದಾರ್ ಬಜಾರ್ ನಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದಾಗ ಹಸುವೊಂದು ಗುದ್ದಿದ ಕಾರಣ ಕಾಲು ಮುರಿದುಕೊಂಡಿದ್ದಾರೆ. ಇದರಿಂದ ಕುಪಿತಗೊಂಡ ಶಕೀಲ್ ಸರ್ದಾರ್ ಬಜಾರ್ ಠಾಣೆಯಲ್ಲಿ ಆರೋಪಿ ಹಸುವಿನ ವಿರುದ್ಧ ದೂರು ಸಲ್ಲಿಸಿದ್ದಾರೆ.
ಪೋಲೀಸರಿಗೆ ಸಹ ಇದೊಂದು ಸವಾಲಾಗಿದ್ದು ದೂರು ದಾಖಲಿಸಿಕೊಂಡಿರುವ ಪೋಲೀಸರು ಅಪಘಾತ ನಡೆದ ಸ್ಥಳದ ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿದ್ದಾರೆ. ಬಳಿಕ ಆರೋಪಿ ಹಸುವನ್ನು ಪತ್ತೆಹಚ್ಚಲಾಗುವುದು ಎಂದು ಅವರು ಹೇಳಿದ್ದಾರೆ.
ದೆಹಲಿಯ ಇಂಡಿಯಾ ಗೇಟ್ ಬಳಿ ಹೇರ್ ಮಸಾಜ್ ಸೆಂಟರ್ ನಡೆಸುತ್ತಿರುವ ಶಕೀಲ್ ಏ.27ರ ಬೆಳಿಗ್ಗೆ 7.15 ರ ಸುಮಾರಿಗೆ ಕೆಲಸದ ನಿಮಿತ್ತ ಸರ್ದಾರ್ ಬಜಾರ್‌ಗೆ ಆಗಮಿಸಿದ್ದರು. ಸರ್ದಾರ್ ಬಜಾರ್ ನ ಶೇರ್ವಾಲಿ ಮಾರುಕಟ್ಟೆ ಬಳಿ ಬಂದಾಗ ಕುತುಬ್ ಚೌಕ್ ಕಡೆಯಿಂದ ಬಂದ ಹಸುವೊಂದು ಶಕೀಲ್ ಚಲಾಯಿಸುತ್ತಿದ್ದ ವಾಹನಕ್ಕೆ ಗುದ್ದಿದೆ. ಹಾಗೆ ಗುದ್ದಿದ ಕಾರಣ ಕೆಳಕ್ಕೆ ಬಿದ್ದ ಶಕೀಲ್ ಕಾಲು ಮುರಿದಿದೆ ಎಂದು ದೂರು ದಾಖಲಾಗಿದೆ.
ಒಂದೊಮ್ಮೆ ಆರೋಪಿ ಹಸು ಸಿಕ್ಕಿದರೆ ಅದನ್ನು ಏನು ಮಾಡಬೇಕೆನ್ನುವುದು ಪೋಲೀಸರಿಗೆ ತಲೆ ತಿನ್ನುತ್ತಿರುವ ಪ್ರಶ್ನೆಯಾಗಿದೆ. ಸಧ್ಯ ಹೊಸ ಬಗೆಯ ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ಐಪಿಸಿ ಸೆಕ್ಷಣ್ ನಿಯಮಾವಳಿಯಂತೆ ಕಾರ್ಯಪ್ರವೃತ್ತರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics