ಕೋಲ್ಕತ್ತಾ: ಖ್ಯಾತ ಅರ್ಥಶಾಸ್ತ್ರಜ್ಞ , ಪಶ್ಚಿಮ ಬಂಗಾಲದ ಪ್ರಥಮ ಎಡ ಪಕ್ಷದ ಹಣಕಾಸು ಸಚಿವ ಅಶೋಕ್ ಮಿತ್ರ (89) ನಿಧನರಾಗಿದ್ದಾರೆ.
ಸುದೀರ್ಘ ಕಾಲದಿಂಡ ಅನಾರೋಗ್ಯಪೀಡಿತರಾಗಿದ್ದ ಅಶೋಕ್ ಮಿತ್ರ ಅವರನ್ನು ಏಪ್ರಿಲ್ ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಢಾಕಾ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದಿದ್ದ ಮಿತ 1947 ಭಾರತ ವಿಭಜನೆಗೊಂಡಾಗ ಬಾಂಗ್ಲಾದೇಶದಿಂದ ಭಾರತಕ್ಕೆ ಬಂದು ನೆಲೆಸಿದ್ದರು. ಬನಾರಸ್ ಹಿಂದು ವಿವಿಯಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದ್ದ ಅವರು ದಿಲ್ಲಿ ಸ್ಕೂಲ್ ಆಫ್ ಇಕಾನಮಿಕ್ಸ್ ನ ಹಳೆ ವಿದ್ಯಾರ್ಥಿ.
ನೆದರ್ಲ್ಯಾಂಡ್ ನಲ್ಲಿ ಪಿಎಚ್‌ಡಿ ಪದವಿ ಪಡೆದ ಅಶೋಕ್ ಮಿತ್ರ 1977-87ರ ಅವಧಿಯಲ್ಲಿ ಪಶ್ಚಿಮ ಬಂಗಾಲದ ಎಡ ರಂಗ ನೇತೃತ್ವದ ಪ್ರಪ್ರಥಮ ಸರ್ಕಾರದ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅವರು ರಾಜ್ಯಸಭೆಯ ಸದಸ್ಯರಾಗಿ ಸಹ ಕರ್ತವ್ಯ ನಿರ್ವಹಿಸಿದ್ದರು.
ಭಾರತ ಸರಕಾರದ ಕೃಷಿ ಧಾರಣೆ ಆಯೋಗದ ಅಧ್ಯಕ್ಷ,ರಾಗಿದ್ದ ಇವರು ವಿಶ್ವಸಂಸ್ಥೆಯ ಆರ್ಥಿಕ ಆಯೋಗದಲ್ಲಿ ಉಪನ್ಯಾಸ ನೀಡಿದ್ದರು. ವಿಶ್ವ ಬ್ಯಾಂಕ್ ನಲ್ಲಿ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು.
ಹಲವು ಪತ್ರಿಕೆಗಲಲ್ಲಿ ಅಂಕಣಕಾರರಾಗಿ ಕೆಲಸ ಮಾಡಿದ್ದ ಅಶೋಕ್ ಮಿತ್ರ ರಾಜಕೀಯ, ಸಮಾಜ, ಆರ್ಥಿಕ ವಿಶ್ಲೇಷಣೆಗಳಿಂದ ಪ್ರಸಿದ್ದರಾಗಿದ್ದರು.
ಅರ್ಥಶಾಸ್ತ್ರಜ್ಞ ಅಶೋಕ್ ಮಿತ್ರ ಅವರ ನಿಧನಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ. "ಅರ್ಥಶಾಸ್ತ್ರಜ್ಞ, ಮಾಜಿ ಹಣಕಾಸು ಸಚಿವ ಅಶೋಕ್ ಮಿತ್ರ ನಿಧನದಿಂದ ಬೇಸರವಾಗಿದೆ. ಅವರ ನಿಧನಕ್ಕೆ ನನ್ನ ಸಂತಾಪವಿದೆ" ಅವರು ಟ್ವೀಟ್ ಮಾಡಿದ್ದಾರೆ.
ಇದಲ್ಲದೆ ಸಿಪಿಐ(ಎಂ), ಸೀತಾರಾಮ್ ಯಚೂರಿ ಸಹ ಮಿತ್ರ ಅವರ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.