ದೇಶ

ರಾಜಸ್ಥಾನದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ; 27 ಸಾವು, ಧರೆಗುರುಳಿದ ವಿದ್ಯುತ್ ಕಂಬಗಳು

Srinivasamurthy VN
ನವದೆಹಲಿ: ರಾಜಸ್ಥಾನದಲ್ಲಿ ರಾತ್ರಿ ಸುರಿದ ಭಾರಿ ಮಳೆಗೆ ಈ ವರೆಗೂ ಸುಮಾರು 27 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ರಾಜಸ್ಥಾನಗದ ಆಳ್ವಾರ್, ಭರತ್ ಪುರ್ ಮತ್ತು ದೋಲ್ಪುರ್ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಮಳೆಯ ಆರ್ಭಟಕ್ಕೆ ಈ ವರೆಗೂ ವಿವಿಧ ಪ್ರಕರಣಗಳಲ್ಲಿ 27 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ಧಾರಾಕಾರ ಮಳೆಯಿಂದಾಗಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಭಾರಿ ಗಾತ್ರದ ಮರಗಳೂ ಕೂಡ ನೆಲಕ್ಕುರುಳಿವೆ. ಮಳೆಯಿಂದಾಗಿ ರಾಜಸ್ಥಾನದಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ ವಿದ್ಯುತ್ ಕಡಿತವಾಗಿದೆ. ರಾಜಧಾನಿ ದೆಹಲಿಯಿಂದ 164 ಕಿ.ಮೀ ದೂರದಲ್ಲಿರುವ ಆಳ್ವಾರ್ ನಲ್ಲೂ ಸಂಪೂರ್ಣ ವಿದ್ಯುತ್ ಕಡಿತವಾಗಿದೆ.
ಇನ್ನು ಭರತ್ ಪುರದಲ್ಲಿ ಅತೀ ಹೆಚ್ಚು ಹಾನಿಯಾಗಿದ್ದು, ನೂರಾರು ಮನೆಗಳಿಗೆ ಹಾನಿಯಾಗಿದೆ. ಅಂತೆಯೇ ವಿವಿಧ ಪ್ರಕರಣಗಳಲ್ಲಿ 11 ಮಂದಿ ಸಾವಿಗೀಡಾಗಿದ್ದಾರೆ.
ದೆಹಲಿ ಸೇರಿದಂತೆ ಉತ್ತರ ಭಾರತದಲ್ಲೂ ಭಾರಿ ಮಳೆ
ಇನ್ನು ರಾಜಸ್ಥಾನ ಮಾತ್ರವಲ್ಲದೇ ಉತ್ತರ ಭಾರತದ ಹಲವೆಡೆ ಬುಧವಾರ ರಾತ್ರಿ  ಅಕಾಲಿಕ  ಮಳೆಯಾಗಿದ್ದು, ಅವಘಡಗಳಿಗೆ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗುಡುಗು ಮಿಂಚು, ಬಿರುಗಾಳಿಯೊಂದಿಗೆ ಭಾರಿ ಮಳೆಯಾಗಿದ್ದು, ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಳೆ ತಂಪೆರೆದಿದೆ. ಆದರೆ ರೈತರು ಅಕಾಲಿಕ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಗೆ ಗುರಿಯಾಗಿದ್ದಾರೆ. ಬುಧವಾರ ರಾತ್ರಿ ದೆಹಲಿಯಲ್ಲಿ 13.4 ಮಿಮಿ ಮಳೆಯಾಗಿರುವ ಬಗ್ಗೆ ವರದಿಯಾಗಿದ್ದು , ರಾತ್ರಿ ಇಡೀ ಮಳೆ ಮುಂದುವರಿದಿತ್ತು. 
ಅಂತೆಯೇ ಬಿಹಾರ ಉತ್ತರ ಪ್ರದೇಶ ಮತ್ತು ಪಂಜಾಬ್‌ನಲ್ಲಿ ಬಲವಾದ ಗಾಳಿ ಸಹಿತ ಮಳೆಯಾಗಿದೆ. 40 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದ ತಾಪಮಾನ ಇಳಿಕೆಯಾಗಿದೆ. ಉತ್ತರಪ್ರದೇಶದಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಆಗ್ರಾದಲ್ಲಿ ಶಿಕ್ಷಣ ಸಂಸ್ಥೆಯೊಂದರ ಕಟ್ಟಡ ಕುಸಿದು ಬಿದ್ದ ಪರಿಣಾಮ 23 ಮಂದಿ ಸಾವನ್ನಪ್ಪಿದ್ದರು ಎಂದು ವರದಿಯಾಗಿದೆ. ಅಂತೆಯೇ ಈ ದುರ್ಘಟನೆಯಲ್ಲಿ 21 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಜ್ಯದ ವಿವಿಧೆಡೆ 130 ಕಿ.ಮೀ ವೇಗದಲ್ಲಿ  ಬಲವಾದ ಗಾಳಿ ಬೀಸಿದ್ದು  ಸಾವಿರಾರು ಜನರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಇನ್ನು ಸಹರಣ್‌ಪುರದಲ್ಲಿ  ಮರ ಬಿದ್ದ ಪರಿಣಾಮ  8 ವರ್ಷದ ಬಾಲಕಿಯೊಬ್ಬಳು ದಾರುಣವಾಗಿ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.
SCROLL FOR NEXT