ಸರ್ಕಾರ ರಚಿಸುವ ಬಿಜೆಪಿ ಯತ್ನ ಸುಪ್ರೀಂ ಕೋರ್ಟ್ ಆದೇಶದಿಂದ ವಿಫಲ: ರಾಹುಲ್ ಗಾಂಧಿ
ನಾಳೆ ಸದನದಲ್ಲಿ ಬಹುಮತ ಸಾಬೀತುಪಡಿಸಬೇಕೆಂದು ಭಾರತೀಯ ಜನತಾ ಪಾರ್ಟಿಗೆ ಸುಪ್ರೀಂ ...
ನವದೆಹಲಿ: ನಾಳೆ ಸದನದಲ್ಲಿ ಬಹುಮತ ಸಾಬೀತುಪಡಿಸಬೇಕೆಂದು ಭಾರತೀಯ ಜನತಾ ಪಾರ್ಟಿಗೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಸ್ವಾಗತಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಗವರ್ನರ್ ವಜುಬಾಯಿ ವಾಲಾ ಅವರ ಕ್ರಮ ಅಸಂವಿಧಾನಿಕವಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬಹುಮತವಿಲ್ಲದೆ ಸರ್ಕಾರ ರಚಿಸುವ ಬಿಜೆಪಿಯ ಕಪಟ ಬುದ್ದಿಗೆ ಸುಪ್ರೀಂ ಕೋರ್ಟ್ ವಿಫಲಗೊಳಿಸಿದೆ ಎಂದು ಹೇಳಿದರು.
ಗವರ್ನರ್ ವಜುಭಾಯಿ ವಾಲಾ ಅವರು ಅಸಂವಿಧಾನಿಕವಾಗಿ ನಡೆದುಕೊಂಡಿದ್ದಾರೆ ಎಂಬ ನಮ್ಮ ನಿಲುವಿಗೆ ಪೂರಕವಾಗಿ ಇಂದಿನ ಸುಪ್ರೀಂ ಕೋರ್ಟ್ ಆದೇಶ ಬಂದಿದೆ. ಸಾಕಷ್ಟು ಶಾಸಕರ ಸಂಖ್ಯೆಯಿಲ್ಲದೆ ಸರ್ಕಾರ ರಚಿಸಲು ಹೊರಟಿರುವ ಬಿಜೆಪಿಯನ್ನು ನ್ಯಾಯಾಲಯ ನಿರ್ಬಂಧ ಹೇರಿದೆ. ಕಾನೂನು ಪ್ರಕಾರವಾಗಿ ಬಿಜೆಪಿಯನ್ನು ನಿಲ್ಲಿಸಿದರೂ ಕೂಡ ಹಣ ಮತ್ತು ತೋಳ್ಬಲಗಳ ವಾಮಮಾರ್ಗದ ಮೂಲಕ ಬಿಜೆಪಿ ಅಧಿಕಾರ ಪಡೆಯಲು ಪ್ರಯತ್ನಿಸಬಹುದು ಎಂದು ಟೀಕಿಸಿದ್ದಾರೆ.