ನವದೆಹಲಿ: ಭಾರತದ ಅತೀ ಶ್ರೀಮಂತ ಪ್ರಾದೇಶಕ ಪಕ್ಷವಾಗಿ ಸಮಾಜವಾದಿ ಪಕ್ಷ ಹೊರಹೊಮ್ಮಿದೆ.
ಒಟ್ಟು 32 ಪ್ರಾದೇಶಕ ಪಕ್ಷಗಳು ಚುನಾವಣಾ ಆಯೋಗದ ಮಾನ್ಯತೆ ಪಡೆದಿದ್ದು ಇವುಗಳ ಒಟ್ಟು ಆದಾಯ 321.03 ಕೋಟಿ ರುಪಾಯಿ ತಲುಪಿದ್ದು ಈ ಪೈಕಿ ಸಮಾಜವಾದಿ ಪಕ್ಷವೊಂದೇ 82.76 ಕೋಟಿ ರುಪಾಯಿ ಆದಾಯ ಗಳಿಸಿದೆ.
2016-17ನೇ ಸಾಲಿನ ಆಧಾರ ಮೇಲೆ ಈ ವರದಿಯನ್ನು ಸಿದ್ಧಪಡಿಸಿದ್ದು ಈ ವರದಿಯನ್ನು ಪ್ರಜಾಪ್ರಭುತ್ವ ಸುಧಾರಣೆಗಳ ಸಂಸ್ಥೆ(ಎಡಿಆರ್) ಬಿಡುಗಡೆ ಮಾಡಿದೆ. ಈ ಸಾಲಿನಲ್ಲಿ 32 ಪ್ರಾದೇಶಿಕ ಪಕ್ಷಗಳ ಒಟ್ಟು ಆದಾಯದ ಶೇಖಡ 25.78ರಷ್ಟು ಪಾಲನ್ನು ಸಮಾಜವಾದಿ ಪಕ್ಷವೊಂದೇ ಹೊಂದಿದೆ.
ನಂತರದ ಸ್ಥಾನದಲ್ಲಿ ತೆಲುಗು ದೇಶಂ ಪಕ್ಷವಿದ್ದು ಇದರ ಒಟ್ಟು ಆದಾಯ 72.92 ಕೋಟಿ ರುಪಾಯಿ ಹೊಂದಿದೆ. ಇನ್ನು 48.88 ಕೋಟಿ ರುಪಾಯಿ ಆದಾಯದೊಂದಿಗೆ ಎಐಎಡಿಎಂಕೆ ಮೂರನೇ ಸ್ಥಾನದಲ್ಲಿದೆ. ಈ ಮೂರು ಶ್ರೀಮಂತ ಪ್ರಾದೇಶಿಕ ಪಕ್ಷಗ ಒಟ್ಟು ಆದಾಯ 2.4.56 ಕೋಟಿ ರುಪಾಯಿ ಆಗಿದೆ.
ದೇಶಾದ್ಯಂತ ಒಟ್ಟು 48 ಪ್ರಾದೇಶಿಕ ಪಕ್ಷಗಳಿದ್ದು ಇವುಗಳ ಪೈಕಿ 16 ಪಕ್ಷಗಳು 2016-17ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಭಾರತೀಯ ಚುನಾವಣಾ ಆಯೋಗ(ಇಸಿಐ)ದ ಜಾಲತಾಣದಲ್ಲಿ ಲಭ್ಯವಾಗಿಲ್ಲ. ಇದರಲ್ಲಿ ಆಮ್ ಆದ್ಮಿ ಪಕ್ಷ(ಎಎಪಿ), ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್(ಜೆಕೆಎನ್ಸಿ), ರಾಷ್ಟ್ರೀಯ ಜನತಾದಳ(ಆರ್ಜೆಡಿ) ಸೇರಿದೆ.